ಕೊರೊನಾದಿಂದಾಗಿ ಚೀನಾದಲ್ಲಿ ಮತ್ತೆ ಪರಿಸ್ಥಿತಿ ಹದಗೆಟ್ಟಿದ್ದು, ಇಲ್ಲಿನ ಸದ್ಯದ ಪರಿಸ್ಥಿತಿ 2020ಕ್ಕಿಂತ ಕೆಟ್ಟದಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಚೀನಾ ಗುಣಮುಖ ರೋಗಿಗಳ ಕ್ವಾರಂಟೈನ್ ಅವಧಿಯನ್ನು ಕಡಿತ ಮಾಡಿ ನೂತನ ಮಾರ್ಗಸೂಚಿ ಹೊರಡಿಸಿದೆ.
ಚೀನಾದಲ್ಲಿನ ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ಅನೇಕ ಭಾಗಗಳಲ್ಲಿ ವೈದ್ಯಕೀಯ ಸಾಮಗ್ರಿಗಳ ಕೊರತೆ ಉಂಟಾಗಿದೆ. ಮುಂಬರುವ ವಾರಗಳಲ್ಲಿ ಚೀನಾದ ಆರೋಗ್ಯ ಸೇವೆಗಳ ಮೇಲಿನ ಒತ್ತಡ ಇನ್ನಷ್ಟು ಹೆಚ್ಚಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.
ಕಳೆದ 10 ವಾರಗಳಲ್ಲಿ ಚೀನಾದಲ್ಲಿ 14000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ವರದಿಯಾಗಿವೆ. ಒಮೈಕ್ರಾನ್ ನಿಂದಾಗಿ ಪ್ರಕರಣಗಳ ವೇಗ ಹೆಚ್ಚಾಗುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಚೀನಾ ಅನೇಕ ನಗರಗಳಲ್ಲಿ ಲಾಕ್‌ಡೌನ್ ಅನ್ನು ವಿಧಿಸಬೇಕಾಗಿದೆ. ಇದು ಚೀನಾದ ಆರ್ಥಿಕತೆಯ ಮೇಲೂ ಪರಿಣಾಮ ಬೀರಬಹುದೆಂಬ ಆತಂಕ ಎದುರಾಗಿದೆ.
ಚೀನಾದ ಕೆಲವು ಭಾಗಗಳು ಈಗಾಗಲೇ ತೀವ್ರ ಬಿಕ್ಕಟ್ಟು ಎದುರಿಸುತ್ತಿದ್ದು, ಇಲ್ಲಿನ ಜನರು ಕೋವಿಡ್ ಪರೀಕ್ಷೆಗಾಗಿ ಹೋರಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇಷ್ಟೇ ಅಲ್ಲ ಚೀನಾದ ಕಟ್ಟುನಿಟ್ಟಾದ 'ಶೂನ್ಯ ಕೋವಿಡ್ ನೀತಿ' ಅಡಿಯಲ್ಲಿ ಜನರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಚೀನಾದಲ್ಲಿ ಕರೋನಾದಿಂದ ಹೆಚ್ಚು ಪ್ರಭಾವಿತವಾಗಿರುವ ಜಿಲಿನ್ ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಮಾಡಲು ಸ್ಥಳಾವಕಾಶವಿಲ್ಲ. ಹೀಗಾಗಿ, ಕ್ವಾರಂಟೈನ್ ಮಾಡಲು ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ. ಇನ್ನೊಂದೆಡೆ ಕೋವಿಡ್ ಮೇಲೆ ನಿಯಂತ್ರಣ ತರಲು ಎರಡ್ಮೂರು ದಿನಗಳಿಗೆ ಮಾತ್ರ ವೈದ್ಯಕೀಯ ಸಾಮಗ್ರಿಗಳನ್ನು ಸರಬರಾಜು ಮಾಡಲು ಸಾಧ್ಯವಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಕ್ವಾರಂಟೈನ ಅವಧಿ ಕಡಿತ
ಇನ್ನು ಕೋವಿಡ್ ನಿಂದ ಗುಣಮುಖರಾದವರ ಕ್ವಾರಂಟೈನ್ ಅವಧಿಯನ್ನು ಚೀನಾ ಆರೋಗ್ಯ ಇಲಾಖೆ ಕಡಿತ ಮಾಡಿದ್ದು, ಇದರಿಂದ ಗಂಭೀರ ರೋಗಿಗಳಿಗೆ ಆಸ್ಪತ್ರೆ ಬೆಡ್ ಒದಗಿಸಲು ಮತ್ತು ವೈದ್ಯರ ಮೇಲಿನ ಒತ್ತಡ ತಗ್ಗಿಸಲು ನೆರವಾಗುತ್ತದೆ ಎಂದು ಹೇಳಲಾಗಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಾಂಕ್ರಾಮಿಕ ರೋಗಶಾಸ್ತ್ರದ ಪ್ರಾಧ್ಯಾಪಕ ಚೆನ್ ಝೆಂಗ್ಮಿನ್, ಸೋಂಕನ್ನು ತಡೆಗಟ್ಟಲು ಕೈಗೊಂಡು ನಿರ್ಬಂಧಗಳು ಸೇರಿದಂತೆ ಪ್ರಸ್ತುತ ಕ್ರಮಗಳು ಯೋಗ್ಯವೇ ಅನ್ನೋದು ನಿರ್ಧರಿಸಲು ಮುಂದಿನ 2 ವಾರಗಳು ನಿರ್ಣಾಯಕವಾಗಿವೆ ಎಂದು ಹೇಳಿದ್ದಾರೆ. ಕಳೆದ ವರ್ಷದಂತೆ ಈ ಬಾರಿಯೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಾಗ ಮಾತ್ರ ನಗರದಲ್ಲಿ ಪ್ರಕರಣಗಳು ಕಡಿಮೆಯಾಗಬಹುದು ಎಂದು ತಿಳಿಸಿದ್ದಾರೆ.
ಚೀನಾ ಕೊರೊನಾ ವಿರುದ್ಧ 'ಶೂನ್ಯ ಕೋವಿಡ್ ನೀತಿ'ಯನ್ನು ಅಳವಡಿಸಿಕೊಂಡಿದ್ದು, ಇದರಡಿ ಸೋಂಕಿತರನ್ನು ಗುರುತಿಸಲಾಗುತ್ತದೆ. ಬಳಿಕ ಅವರನ್ನು ಕ್ವಾರಂಟೈನ್ ಮಾಡಲಾಗುತ್ತದೆ. ಚೀನಾದಲ್ಲಿ ಸುಮಾರು 90% ಜನರು ಕೊರೊನಾ ಲಸಿಕೆ ಪಡೆದಿದ್ದಾರೆ. ಆದ್ರೂ ಸಹ ಸಾಕಷ್ಟು ವಯಸ್ಸಾದ ಜನರು ಬೂಸ್ಟರ್ ಡೋಸ್ ಗಳನ್ನು ಪಡೆದುಕೊಂಡಿಲ್ಲ. ಇದು ಸೋಂಕು ಮತ್ತು ಸಾವಿನ ಅಪಾಯವನ್ನು ಹೆಚ್ಚಿಸಲಿದೆ ಎಂದು ಚೀನಾದ ತಜ್ಞರು ಹೇಳುತ್ತಾರೆ. ಈ ಮಧ್ಯೆ ಒಮೈಕ್ರಾನ್ ಅನ್ನು ತಡೆಯುವಲ್ಲಿ ಚೀನೀ ಲಸಿಕೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
ಲಕ್ಷಾಂತರ ಜನರು ಲಾಕ್ ಡೌನ್ ನಿಂದಾಗಿ ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದಾರೆ. 17 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಷೆಂಗೆನ್‌ನಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಒಬ್ಬ ಸದಸ್ಯ ಮಾತ್ರ ಎರಡು ಅಥವಾ ಮೂರು ದಿನಗಳಲ್ಲಿ ಒಮ್ಮೆ ಹೊರಗೆ ಹೋಗಬಹುದು ಎಂದು ಆದೇಶಿಸಲಾಗಿದೆ. ಈ ಮಧ್ಯೆ, ಮಾರ್ಚ್ 21ರಿಂದ ಮೇ 1ರ ನಡುವೆ ನಿಗದಿತ 106 ಅಂತರರಾಷ್ಟ್ರೀಯ ವಿಮಾನಗಳನ್ನು ಚೀನಾದ ಇತರ ನಗರಗಳಿಗೆ ಮಾರ್ಗ ಬದಲಾಯಿಸುವ ನಿರ್ಧಾರ ಕೈಗೊಳ್ಳಲಾಗಿದೆ.