ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಸ್ಪಷ್ಟತೆ ಇಲ್ಲ : ಬೊಮ್ಮಾಯಿ ಕಿಡಿ
ಶನಿವಾರ, 3 ಜೂನ್ 2023 (10:45 IST)
ಬೆಂಗಳೂರು : ಪ್ರಣಾಳಿಕೆಯಲ್ಲಿ ಹೇಳಿದ 5 ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಇಂದು ಘೋಷಣೆ ಮಾಡಿದ್ದು, ಈ ಸಂಬಂಧ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ನ ಗ್ಯಾರಂಟಿಗಳಲ್ಲಿ ಸ್ಪಷ್ಟತೆ ಇಲ್ಲ ಎಂದು ಹೇಳಿದ್ದಾರೆ. ರಾಜ್ಯಕ್ಕೆ ಕೇಂದ್ರ ಸರ್ಕಾರ 5 ಕೆ.ಜಿ ಕೊಡುತ್ತೆ. ಇವರು ಕೊಡೋದು ಈಗ 5 ಕೆಜಿ. ಅನ್ನ ಭಾಗ್ಯದಲ್ಲಿ 10 ಕೆ.ಜಿ ಅಂತಾ ಹೇಳ್ತಿಲ್ಲ. 10 ಕೆಜಿ ಆಹಾರ ಧಾನ್ಯ ಅಂತಾ ಸಿಎಂ ಹೇಳ್ತಾರೆ. ಈ 10 ಕೆಜಿಯಲ್ಲಿ ರಾಗಿ, ಜೋಳ ಮತ್ತು ಗೋಧಿ ಕೊಡ್ತೀರಾ..?. ಇದರ ಬಗ್ಗೆ ಸ್ಪಷ್ಟತೆ ಕೊಡ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
2,000 ರೂ. ಮನೆ ಯಜಮಾನಿಗೆ ಕೊಡೋದರಲ್ಲಿಯೂ ಮಹಾಮೋಸ ಅಡಗಿದೆ. ಆನ್ ಲೈನ್ ಅರ್ಜಿಯಲ್ಲಿ ಅರ್ಧ ತೆಗೆದು ಹಾಕ್ತಾರೆ. ನಾವು ನಿಜವಾಗಲೂ ಬಡವರಿಗೆ ಅನುಕೂಲ ಮಾಡುತ್ತೇವೆ ಅಂದರೆ ಎಂಪವರ್ ಮೆಂಟ್ ಇರಬೇಕು. ಆನ್ ಲೈನ್ ಅರ್ಜಿ ಕರೆದು ಅರ್ಧ ತೆಗೆದು ಮೋಸ ಮಾಡ್ತಾರೆ.
ಬಹಳ ಸರಳವಾಗಿ ಮಾಡಬಹುದಿತ್ತು. ಪಿಡಿಓ ಗಳು ಇದ್ದಾರೆ ಅವರ ಮುಖಾಂತರ ಕೊಡಿಸಬಹುದಿತ್ತು. ಈವಾಗ ಆಗಸ್ಟ್ನಿಂದ ಕೊಡುತ್ತೇವೆ ಅಂತಾರೆ. ಜೂನ್, ಜುಲೈದು ಸೇರಿಸಿಕೊಡ್ತಾರಾ ಸ್ಪಷ್ಟತೆ ಇಲ್ಲ. ಜೂನ್, ಜುಲೈದು ಸೇರಿಸಿ ಕೊಟ್ಟರೆ ಪ್ರಾಮಾಣಿಕತೆ ಅಂತಾ ಹೇಳಬಹುದಿತ್ತು. ಈ ತಿಂಗಳಿಂದಲೇ ಕೊಡಬಹುದಿತ್ತು. ಆದರೆ ಎರಡು ತಿಂಗಳು ಯಾಮಾರಿಸ್ತಾ ಇದ್ದಾರೆ ಎಂದು ಹೇಳಿದರು.