ಕಾವೇರಿ ನೀರು ಹಂಚಿಕೆ: ವಿಧಾನಸಭೆ ನಿರ್ಣಯದಿಂದ ಸಂವಿಧಾನ ಬಿಕ್ಕಟ್ಟು ಎದುರಾಗಲ್ಲ ಎಂದ ಆಚಾರ್ಯ

ಶನಿವಾರ, 24 ಸೆಪ್ಟಂಬರ್ 2016 (18:19 IST)
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ವಿರುದ್ಧ ವಿಶೇಷ ವಿಧಾನ ಮಂಡಲ ಅಧಿವೇಶನದಲ್ಲಿ ತೆಗೆದುಕೊಂಡಿರುವ ಕ್ರಮ ಸಮಂಜಸವಾಗಿದೆ. ಇದರಿಂದ ಸಂವಿಧಾನಿಕ ಬಿಕ್ಕಟ್ಟು ಉಂಟಾಗುವ ಸಾಧ್ಯತೆ ಇಲ್ಲ ಎಂದು ಮಾಜಿ ಅಡ್ವೋಕೇಟ್ ಜನರಲ್ ಬಿ.ವಿ.ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.  
 
ಬೆಂಗಳೂರಿನಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಏರ್ಪಡಿಸಿದ್ದ ಕಾವೇರಿ ಜಲ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ರಾಜ್ಯ ಸರಕಾರ ಕೈಗೊಂಡಿರುವ ನಿರ್ಧಾರದ ಕುರಿತು ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. 
 
ಶಾಸನ ಸಭೆಯ ನಿರ್ಣಯದ ವಿರುದ್ಧ ಕೋರ್ಟ್ ಯಾವುದೇ ಆದೇಶ ಹಾಗೂ ತೀರ್ಮಾನ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಸುಪ್ರೀಂ ಕೋರ್ಟ್ ನೀಡಿರುವ ಜಲ ಮಂಡಳಿ ರಚನೆ ಆದೇಶ ಸಹ ಸಮಂಜಸವಾಗಿಲ್ಲ ಎಂದರು.
 
ತಮಿಳುನಾಡು ಸರಕಾರ ಕಳೆದ ಸಾಲಿನಲ್ಲಿ ತ್ರಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ, ಜಲ ಮಂಡಳಿಯಿಂದ ಉಂಟಾಗುವ ಸಮಸ್ಯೆಗಳ ಕುರಿತು ತ್ರಿಸದಸ್ಯ ಪೀಠ ತಮಿಳುನಾಡಿಗೆ ಮನವರಿಕೆ ಮಾಡಿಕೊಟ್ಟ ನಂತರ ತಮಿಳುನಾಡು ಸರಕಾರ ಜಲ ಮಂಡಳಿ ಸ್ಥಾಪನೆಗಾಗಿ ಸಲ್ಲಿಸಿದ ಅರ್ಜಿಯನ್ನು ಹಿಂಪಡೆದಿದೆ. ಇಂತಹ ಪರಿಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಜಲ ಮಂಡಳಿ ರಚನೆಗಾಗಿ ನೀಡಿರುವ ಆದೇಶ ಗೊಂದಲಮಯವಾಗಿದೆ ಎಂದು ಮಾಜಿ ಅಡ್ವೋಕೇಟ್ ಜನರಲ್ ಬಿ.ವಿ.ಆಚಾರ್ಯ ತಿಳಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ