ಆರೂವರೆ ಕೋಟಿ ಜನರಿಗೂ ಸರ್ಕಾರದ ಯೋಜನೆಗಳ ಅರಿವು ಮೂಡಿಸಲು ಯತ್ನ

ಶನಿವಾರ, 19 ಮಾರ್ಚ್ 2022 (20:24 IST)
ಎಲ್ಲಾ ಇಲಾಖೆಗಳಿಗೆ ಮಾತೃ ಇಲಾಖೆ. ಇದು ತಾಯಿ ಇದ್ದ ಹಾಗೆ. ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಅಧಿಕಾರಿಯೂ ಮಾತೃ ಹೃದಯವನ್ನು ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕಿವಿಮಾತು ಹೇಳಿದರು.
 
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಕನಸವಾಡಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾಯಿತ ಪ್ರತಿನಿಧಿಯ ಗೆಲುವಿನ ದಿನದಿಂದ ಆತನ ಕೆಲಸ ಶುರುವಾಗಿದೆ. 5 ವರ್ಷವೂ ಆತ ಜನರಿಗಾಗಿ ಕೆಲಸ ಮಾಡಬೇಕು. ಸರ್ಕಾರದ ಯೋಜನೆ ಮತ್ತು ಸೌಲಭ್ಯಗಳನ್ನು ತಲುಪಿಸಬೇಕು. 
 
ಸರ್ಕಾರ ಯೋಜನೆ, ಸೌಲಭ್ಯಗಳನ್ನು ಘೋಷಣೆ ಮಾಡುತ್ತದೆ. ಆದರೆ ಅಧಿಕಾರಿಗಳು ಅದನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಬೇಕು. ಕಂದಾಯ ಇಲಾಖೆಯಂತಹ ದೊಡ್ಡ ಇಲಾಖೆಯಲ್ಲಿ ಕೆಲಸ ಹೇಗೆ ನಡೆಯುತ್ತಿದೆ ಅನ್ನುವುದು ಜನರಿಗೆ ಗೊತ್ತಿದೆ.  ಸಣ್ಣದೊಂದು ಕೆಲಸ ಆಗಬೇಕು ಅಂದರೂ ಚಪ್ಪಲಿ ಸವೆಸುವ ಕಾಲವಿತ್ತು. ಈಗಿನ ಸರ್ಕಾರ ಇದೆಲ್ಲವನ್ನೂ ಮನಗಂಡು, ಜನರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸುವ  ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಲ್ಲಿ 2071 ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಗುತ್ತಿದೆ.  ಕರ್ನಾಟಕ ಸರ್ಕಾರದ ಈ ಸೇವೆ ರಾಜ್ಯದ ಎಲ್ಲಾ ಕಡೆಯೂ ಸಿಗಲಿದೆ ಎಂದರು.
 
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ:
 
ಈ ಯೋಜನೆಯ ಮೂಲಕ ಜನರು 5 ಲಕ್ಷ ರೂಪಾಯಿ ಮೊತ್ತದ ಆರೋಗ್ಯ ವಿಮೆಯನ್ನು ಪಡೆಯುತ್ತಿದ್ದಾರೆ. ಯಾವುದೇ ಆರೋಗ್ಯ ಸೇವೆಯನ್ನು  ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಪಡೆದರೂ, ಈ ಕಾರ್ಡ್ ಹೊಂದಿರುವವರ ಬಿಲ್ ಅನ್ನು ಸರ್ಕಾರವೇ ಭರಿಸಲಿದೆ. ಇದು ಉಚಿತ ಆರೋಗ್ಯ ಸೇವೆಯಾಗಿದ್ದು, ಒಮ್ಮೆ ಕಾರ್ಡ್ ಮಾಡಿಸಿಕೊಂಡರೆ ಜೀವನಪೂರ್ತಿ ಇರಲಿದೆ. ಪ್ರತಿಯೊಬ್ಬರು ಕೂಡ ಆರೋಗ್ಯ ಕಾರ್ಡ್ ಮಾಡಿಸಿಕೊಳ್ಳಬೇಕು. ಯಾವುದೇ ಅಭಿವೃದ್ಧಿ ಹೊಂದಿದ ರಾಷ್ಟ್ರದಲ್ಲೂ ಉಚಿತ ಆರೋಗ್ಯ ವಿಮೆ ಇಲ್ಲ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ 75 ವರ್ಷಗಳಲ್ಲಿ ಯಾವುದೇ ಸರ್ಕಾರ ಯೋಚನೆ ಮಾಡಿರದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ . ಜನೌಷಧ ಕೇಂದ್ರಗಳಲ್ಲಿ ಔಷಧಿಗಳ ಬೆಲೆ 40% ರಿಂದ 80% ಕಡಿಮೆಇದೆ. ಇದರಿಂದ ಬಡ ಜನರಿಗೆ ಉಪಯೋಗವಾಗುತ್ತಿದೆ ಎಂದು ಹೇಳಿದೆ. 
 
ರೈತರಿಗೆ ನೆರವು:
 
ರೈತರ ಮಕ್ಕಳಿಕೆ ಸರ್ಕಾರ ವಿದ್ಯಾರ್ಥಿವೇತನ ನೀಡುತ್ತಿದೆ. ಇದಕ್ಕಾಗಿ 1000 ಕೋಟಿ ರೂ. ಮೀಸಲಿಡಲಾಗಿದೆ. ಈ ಹಿಂದೆ ಇದು ಪಿಯುಸಿ ಮತ್ತು ಉನ್ನತ ಶಿಕ್ಷಣಕ್ಕೆ ಮಾತ್ರ ಮೀಸಲಾಗಿತ್ತು. ಈಗ ಇದನ್ನು 8, 9, 10ನೇ ತರಗತಿಗಳಿಗೂ ವಿಸ್ತರಿಸಲಾಗಿದೆ. ಆಡಳಿತ, ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕಾರಣ ಮಾಡುವುದಿಲ್ಲ. ರಾಜ್ಯದ ಆರೂವರೆ ಕೋಟಿ ಜನರಿಗಾಗಿ ಸರ್ಕಾರ  ಯೋಜನೆಗಳನ್ನು ರೂಪಿಸಿದೆ ಎಂದರು.
 
ನೀರಾವರಿ ಯೋಜನೆಗೆ ಒತ್ತು:
 
ದೀಪದ ಕೆಳಗೆ ಕತ್ತಲು ಅನ್ನುವಂತೆ  ರಾಜಧಾನಿ ಬೆಂಗಳೂರು ಪಕ್ಕದಲ್ಲೇ ಇದ್ದರೂ, ದೊಡ್ಡಬಳ್ಳಾಪುರ ಹೆಚ್ಚು ಅಭಿವೃದ್ಧಿಯಾಗಿಲ್ಲ. ಚಿಕ್ಕಬಳ್ಳಾಪುರದಿಂದ ದೊಡ್ಡಬಳ್ಳಾಪುರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಎತ್ತಿನ ಹೊಳೆ ಯೋಜನೆಗೆ ಸರ್ಕಾರ 3000 ಕೋಟಿ ಮೀಸಲಿಟ್ಟಿದೆ. ಶೀಘ್ರದಲ್ಲೇ ಆ ಯೋಜನೆ ಕಾರ್ಯಗತವಾಗಲಿದೆ.  ಎತ್ತಿನ ಹೊಳೆ ಯೋಜನೆಗಾಗಿ ಹಲವು ಗ್ರಾಮಗಳಲ್ಲಿ 2534 ಎಕ್ರೆ ಜಮೀನು ಭೂ ಸ್ವಾಧೀನ ಪ್ರಕ್ರಿಯೆಯ ಪ್ರಿಲಿಮಿನರಿ ನೋಟಿಫಿಕೇಶನ್ ಆಗಿದೆ ಎಂದು ಹೇಳಿದರು. 
 
ದೊಡ್ಡಬಳ್ಳಾಪುರದಲ್ಲಿ ಜಿಲ್ಲಾಸ್ಪತ್ರೆ ಇಲ್ಲ. ಅಭಿವೃದ್ಧಿಯ ವಿಚಾರದಲ್ಲಿ ಭಾವಚಿತ್ರ. ರಾಜಕಾರಣ ಮತ್ತು ಅಭಿವೃದ್ಧಿಯ ವಿಚಾರ ಬೇರೆ ಬೇರೆ. ವೃಷಭಾವತಿಯಿಂದ ದೊಡ್ಡಬಳ್ಳಾಪುರಕ್ಕೆ ನೀರು ತರುವ ಯೋಜನೆ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು. ಅಧಿಕಾರಿಗಳು ಎಚ್ಚರಿಕೆಯಿಂದ ಮತ್ತು ಕ್ರಿಯಾಶೀಲತೆಯಿಂದ ಕೆಲಸ ಮಾಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ