ಐಟಿ ಅಧಿಕಾರಿಗಳ ಮೇಲೆ ದಾಳಿ ವರದಿಯಲ್ಲಿ ಸತ್ಯಾಂಶವಿಲ್ಲ: ಆರ್.ಕೆ.ದತ್ತಾ

ಮಂಗಳವಾರ, 10 ಅಕ್ಟೋಬರ್ 2017 (14:07 IST)
ಐಟಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ಸಿದ್ದತೆ ಕುರಿತ ವರದಿಯನ್ನು ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಾ ತಳ್ಳಿಹಾಕಿದ್ದಾರೆ.
ಐಟಿ ಅಧಿಕಾರಿಗಳು ಕೇವಲ ಕಾಂಗ್ರೆಸ್ ನಾಯಕರ ನಿವಾಸಗಳ ಮೇಲೆ ದಾಳಿ ನಡೆಸುತ್ತಿರುವುದರಿಂದ ಸೇಡಿನ ಕ್ರಮವಾಗಿ ಎಸಿಬಿ ಐಟಿ ಅಧಿಕಾರಿಗಳ ಮೇಲೆ ದಾಳಿ ನಡೆಸಲು ಸಿದ್ದತೆ ನಡೆಸುತ್ತಿದೆ ಎನ್ನುವ ವರದಿಗಳು ತೀವ್ರ ಕೋಲಾಹಲ ಸೃಷ್ಟಿಸಿದ್ದವು.
 
ಇಂದು ಐಟಿ ಇಲಾಖೆಯ ಮಹಾನಿರ್ದೇಶಕ ಬಾಲಕೃಷ್ಣ, ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಾ ಅವರನ್ನು ಭೇಟಿ ಮಾಡಿ ವರದಿಗಳ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ.
 
ಐಟಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸಿದಲ್ಲಿ ಉಭಯ ಇಲಾಖೆಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಲಿದೆ ಎಂದು ಐಟಿ ಇಲಾಖೆಯ ಮಹಾನಿರ್ದೇಶಕ ಬಾಲಕೃಷ್ಣ ಕಳವಳ ವ್ಯಕ್ತಪಡಿಸಿದ್ದಾಗಿ ಮೂಲಗಳು ತಿಳಿಸಿವೆ. 
 
ಆದರೆ, ಐಟಿ ಅಧಿಕಾರಿಗಳ ಮೇಲೆ ದಾಳಿ ನಡೆಸುವಂತಹ ಯಾವುದೇ ಉದ್ದೇಶವಿಲ್ಲ. ವರದಿಗಳು ಕೇವಲ ಉಹಾಪೋಹಗಳು ಎಂದು ದತ್ತಾ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಾ ಅವರೊಂದಿಗೆ ನಡೆಸಿದ ಚರ್ಚೆಯ ಬಗ್ಗೆ ಬಾಲಕೃಷ್ಣ, ಗೃಹ ಸಚಿವಾಲಯಕ್ಕೆ ಮಾಹಿತಿ ರವಾನಿಸಿದ್ದಾರೆ. ಮತ್ತೊಂದೆಡೆ ಆರ್.ಕೆ.ದತ್ತಾ ಕೂಡಾ ಬಾಲಕೃಷ್ಣ ಅವರೊಂದಿಗೆ ನಡೆಸಿದ ಚರ್ಚೆಯ ಬಗ್ಗೆ ಸಿಎಂ ಕಚೇರಿಗೆ ಮಾಹಿತಿ ಕಳುಹಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ