ಬನ್ನೇರುಘಟ್ಟ ಸಫಾರಿಯಲ್ಲಿ ಬಿಳಿ ಹುಲಿ ದಾಳಿಗೆ ಕಾವಲುಗಾರ ಬಲಿ

ಶನಿವಾರ, 7 ಅಕ್ಟೋಬರ್ 2017 (21:37 IST)
ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಹುಲಿ ಸಫಾರಿಯಲ್ಲಿ ಆಹಾರ ಹಾಕುತ್ತಿದ್ದ ಕಾವಲುಗಾರನ ಮೇಲೆ ಒಂದೂವರೆ ವರ್ಷ ವಯಸ್ಸಿನ ಎರಡು ಬಿಳಿ ಹುಲಿ ದಾಳಿ ನಡೆಸಿ ಸಾಯಿಸಿವೆ.
                         ಸಾಂದರ್ಭಿಕ ಚಿತ್ರ

ಹಕ್ಕಿಪಿಕ್ಕಿ ಕಾಲೋನಿಯ ಆಂಜನೇಯ (ಆಂಜಿನಿ)(40) ಮೃತ ಕಾವಲುಗಾರ. ಈ ಹಿಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಈತ, ಅ. 1ರಿಂದ ಉದ್ಯಾನದಲ್ಲಿ ಕೆಲಸಕ್ಕೆ ಸೇರಿದ್ದ. ಹಿರಿಯ ಅನುಭವಿ ಕೆಲಸಗಾರ ಹುಚ್ಚೇಗೌಡ ಹುಲಿಗಳನ್ನು ನೋಡಿಕೊಳ್ಳುತ್ತಿದ್ದ. ಇಂದು ಮಾಮೂಲಿ ಸಹಾಯಕ ರಜೆಯಿದ್ದ ಕಾರಣ, ಹುಚ್ಚೇಗೌಡ ಆಂಜಿನಿಯನ್ನು ಜತೆಯಲ್ಲಿ ಕರೆದೊಯ್ದಿದ್ದ.

ಸಂಜೆ ಪ್ರಯಾಣಿಕರೆಲ್ಲಾ ಹೊರಹೋದ ಮೇಲೆ ಆಹಾರ ಹಾಕುವುದು ವಾಡಿಕೆ. 5 ಗಂಟೆ ವೇಳೆ ಬಿಳಿಹುಲಿಗಳ ಬೋನಿಗೆ ಆಹಾರ ಹಾಕಲು ತೆರಳಿದ್ದ ಆಂಜಿನಿ, ಬೇರೆ ಹುಲಿಗಳ ಬೋನಿಗೆ ಆಹಾರ ಹಾಕಿದ್ದಾನೆ. ನಂತರ ಪಕ್ಕದ ಬೋನಿನಲ್ಲಿ ಬೆಳಗ್ಗೆ ಹಾಕಿದ್ದ ಮಾಂಸದ ಮೂಳೆಗಳು ಇದ್ದದ್ದನ್ನು ಕಂಡು ಅವನ್ನು ಹೊರತೆಗೆಯಲು ಹೋಗಿದ್ದಾನೆ. ಈ ಬೋನಿನಲ್ಲಿ ಶಾಸಕ ಅಶೋಕ್‍ಖೇಣಿ ದತ್ತು ಪಡೆದಿರುವ ಸೂರ್ಯ ಮತ್ತು ಅದರ ಎರಡು ಮರಿಗಳಾದ ವನ್ಯ ಹಾಗೂ ಝಾನ್ಸಿರಾಣಿ ಇದ್ದವು. ಇದರ ಅರಿವಿರದ ಕಾವಲುಗಾರ ಮೈಮರೆತು ಬೋನಿನೊಳಗೆ ನುಗ್ಗಿದ್ದಾನೆ. ಕೂಡಲೇ ಮೇಲೆರಗಿದ ಒಂದು ಮರಿ ಆಂಜಿನಿಯ ಕುತ್ತಿಗೆಯನ್ನು ಕಚ್ಚಿ ರಕ್ತ ಹೀರಿದೆ. ಹಿಂದೆಯೇ ದಾಳಿ ಮಾಡಿದ ಮತ್ತೊಂದು ಮರಿ ದೇಹವನ್ನು ಕಚ್ಚಿ ಛಿದ್ರಗೊಳಿಸಿದೆ ಎನ್ನಲಾಗಿದೆ.

ಹುಲಿಗಳು ದಾಳಿ ಮಾಡುತ್ತಿದ್ದಂತೆಯೇ ಆಂಜಿನಿ ಕಿರುಚಾಡಿದ್ದಾನೆ. ಆತನ ರೋಧನೆಯನ್ನು ಕೇಳಿದ ಮರಿಗಳು ಮತ್ತಷ್ಟು ರೋಷಗೊಂಡು ದೇಹವನ್ನು ಸಫಾರಿಯೊಳಗೆ ಎಳೆದಾಡಿವೆ. ಇದನ್ನು ಗಮನಿಸಿದ ಬೇರೆ ಕಾವಲುಗಾರರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದಂತೆ ಸ್ಥಳಕ್ಕೆ ಬಂದ ಉದ್ಯಾನದ ವೈದ್ಯರು ಹಾಗೂ ಹಿರಿಯ ಅಕಾರಿಗಳು ಪರಿಶೀಲಿಸಿ, ಸಿಬ್ಬಂದಿಯ ನೆರವಿನೊಂದಿಗೆ ಹುಲಿಗಳನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಆಂಜಿನಿಯನ್ನು ಸಾಯಿಸಿದ ನಂತರ ಆತನ ದೇಹದ ಭಾಗವನ್ನು ಎರಡೂ ಹುಲಿಗಳು ಸೇರಿ ತಿಂದಿವೆ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ, ಮೃತನ ಕುಟುಂಬದವರಾಗಲಿ ದೃಢಪಡಿಸಿಲ್ಲ. ಮೃತ ಆಂಜಿನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆಂದು ತಿಳಿದು ಬಂದಿದೆ. ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು ಶವವನ್ನು ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ.

ಉದ್ಯಾನದ ನಿಯಮಗಳ ಪ್ರಕಾರ ಅನುಭವಿ ಕೆಲಸಗಾರರನ್ನು ಮಾತ್ರ ಕ್ರೂರ ಪ್ರಾಣಿಗಳ ಸಫಾರಿ ಬಳಿ ಕೆಲಸಕ್ಕೆ ನಿಯೋಜಿಸಬೇಕು. ಶನಿವಾರ ಸಂಜೆ ಹುಲಿಗಳನ್ನು ನೋಡಿಕೊಳ್ಳಬೇಕಿದ್ದ ಮುಖ್ಯ ಕಾವಲುಗಾರನ ಸಹಾಯಕ ಬಾರದ ಕಾರಣ ಆಂಜನೇಯನನ್ನು ಕರೆದೊಯ್ಯಲಾಗಿತ್ತು. ಆಂಜನೇಯನಿಗೆ ಹುಲಿ ಬೋನಿನ ಬಗ್ಗೆಯಾಗಲಿ, ಹುಲಿಗಳ ಬಗ್ಗೆಯಾಗಲಿ ಅರಿವಿರಲಿಲ್ಲ ಎನ್ನಲಾಗಿದೆ.

ನಿರ್ಲಕ್ಷ್ಯ..?
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಇತ್ತೀಚೆಗೆ ನಿರ್ಲಕ್ಷ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಹಿಂದೆ ಸಸ್ಯಹಾರಿ ಸಫಾರಿಯಲ್ಲಿ ಸಿಬ್ಬಂದಿಯ ಮೇಲೆರಗಿದ್ದ ಕಾಡುಕೋಣ ಕಾವಲುಗಾರನನ್ನು ಸಾಯಿಸಿತ್ತು. ನಂತರ ಉದ್ಯಾನದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಲವು ಪ್ರಾಣಿಗಳು ಸಾವಿಗೀಡಾಗಿದ್ದವು.

ಕೆಲ ದಿನಗಳ ಹಿಂದೆ ವಿದೇಶದಿಂದ ಪ್ರಾಣಿ ವಿನಿಮಯ ಆಧಾರದ ಮೇಲೆ ತಂದಿದ್ದ ಗರ್ಭಿಣಿ ಝೀಬ್ರಾ ಗುಂಡಿಯಲ್ಲಿ ಬಿದ್ದು ಮೃತಪಟ್ಟಿತ್ತು. ನಂತರ ಚಿರತೆಯೊಂದು ಸಾವನ್ನಪ್ಪಿತ್ತು. ಇದಾದ ಮೇಲೆ ಇತ್ತೀಚೆಗೆ ಕಾವಲುಗಾರನ ನಿರ್ಲಕ್ಷ್ಯದಿಂದ ತಾನಿದ್ದ ಆವರಣದಿಂದ ಬೇರೆ ಆವರಣಕ್ಕೆ ಅರಿವಿಲ್ಲದೆ ತೆರಳಿದ್ದ ಬಿಳಿ ಹುಲಿ ಮೇಲೆ ದಾಳಿ ನಡೆದಿತ್ತು. ತಾವಿದ್ದ ಆವರಣಕ್ಕೆ ಬಂದಿದ್ದ ಬಿಳಿಹುಲಿಯನ್ನು ಎರಡು ರಾಯಲ್ ಬೆಂಗಾಲ್ ಹುಲಿಗಳು ದಾಳಿ ನಡೆಸಿ ತೀವ್ರ ಗಾಯಗೊಳಿಸಿದ್ದವು. ಚಿಕಿತ್ಸೆ ಫಲಕಾರಿಯಾಗದೆ ಬಿಳಿಹುಲಿ ಮೃತಪಟ್ಟಿತ್ತು. ಈಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾವಲುಗಾರ ಹುಲಿಗಳ ದಾಳಿಗೊಳಗಾಗಿ ಮೃತಪಟ್ಟಿದ್ದಾನೆ.

ಘಟನೆ ಬಗ್ಗೆ ಯಾವುದೇ ಅಧಿಕಾರಿ ಮಾಹಿತಿ ನೀಡಿಲ್ಲ. ವರದಿಗಾರರು ಮಾಡಿದ ಫೋನ್ ಕರೆಯನ್ನು ಅಧಿಕಾರಿಗಳು ಕಟ್ ಮಾಡುತ್ತಿದ್ದರು. ಸಿಬ್ಬಂದಿ ಸಾವಿನ ಕುರಿತು ಯಾವುದೇ ಮಾಹಿತಿ ನೀಡದಂತೆ ಹಾಗೂ ಮಾಧ್ಯಮದವರನ್ನು ಉದ್ಯಾನದೊಳಗೆ ಬಿಡದಂತೆ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಅಧಿಕಾರಿಗಳು ಉದ್ಯಾನದ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆಂದು ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ