ಈ ಚುನಾವಣೆ ಕಾಂಗ್ರೆಸ್ ಭರವಸೆ- ಬಿಜೆಪಿ ಬುರುಡೆ ನಡುವಿಣ ಹೋರಾಟ: ಶಿವಕುಮಾರ್

Sampriya

ಭಾನುವಾರ, 5 ಮೇ 2024 (14:30 IST)
ಬೆಳಗಾವಿ: ನಾವು ಕೊಟ್ಟ ಭರವಸೆ ಈಡೇರಿಸಿದ್ದೇವೆ. ಬಿಜೆಪಿ 10 ವರ್ಷಗಳಿಂದ ಕೇವಲ ಬುರುಡೆ ಬಿಟ್ಟಿದೆ. ಹೀಗಾಗಿ ಈ ಚುನಾವಣೆ ಕಾಂಗ್ರೆಸ್ ಭರವಸೆ ಮತ್ತು ಬಿಜೆಪಿ ಬುರುಡೆ ನಡುವಣ ಹೋರಾಟ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಳಗಾವಿಯಲ್ಲಿ ಶುಕ್ರವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಶಿವಕುಮಾರ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಉಪಸ್ಥಿತರಿದ್ದರು.

ಕಳೆದ 10 ವರ್ಷಗಳಲ್ಲಿ ಬಿಜೆಪಿ ತಾನು ಕೊಟ್ಟ ಯಾವ ಮಾತನ್ನು ಈಡೇರಿಸಿದೆ? ಬಿಜೆಪಿ ಭಾವನೆ ಮೇಲೆ ಮಾತನಾಡುತ್ತಿದ್ದಾರೆ ಹೊರತು ಜನರ ಬದುಕಿನ ಬಗ್ಗೆ ಮಾತಾಡುತ್ತಿಲ್ಲ. ನಮ್ಮ ಗ್ಯಾರಂಟಿಗಳನ್ನು ಟೀಕೆ ಮಾಡಿದವರು ಇಂದು ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಬಿಜೆಪಿ ಹೆಸರೂ ಹಾಕದೇ, ಕೇವಲ ಮೋದಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಅಲೆ ಇದೆ. ನಮ್ಮದು 1 ಮತಕ್ಕೆ 10 ಗ್ಯಾರಂಟಿ. ಈ ದೇಶದ ಜನರ ಬದುಕಿನಲ್ಲಿ ಬದಲಾವಣೆ ತರಲು ಕಾಂಗ್ರೆಸ್ ಇಂತಹ ಐತಿಹಾಸಿಕ ತೀರ್ಮಾನ ಮಾಡಿದೆ. ನಾನು ಸಿದ್ದರಾಮಯ್ಯ ಅವರು ಗ್ಯಾರಂಟಿಗೆ ಸಹಿ ಹಾಕಿದಂತೆ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರು ಕೂಡ ಗ್ಯಾರಂಟಿಗೆ ಸಹಿ ಹಾಕಿದ್ದಾರೆ. ಈ ಗ್ಯಾರಂಟಿಗಳನ್ನು ಮನೆ ಮನೆಗೆ ತಲುಪಿಸಲಾಗಿದೆ. ನಮ್ಮ ಸರ್ಕಾರ ಕೇಂದ್ರದಲ್ಲೂ ಅಧಿಕಾರಕ್ಕೆ ಬರಲಿದ್ದು, ಈ ಗ್ಯಾರಂಟಿಗಳನ್ನು ಜಾರಿ ಮಾಡಲಿದೆ.

ಗ್ಯಾರಂಟಿ ನಿಲ್ಲಿಸುವುದು ಬಿಜೆಪಿ ಭ್ರಮೆ:

ಯಡಿಯೂರಪ್ಪನವರು ಚುನಾವಣೆ ಬಳಿಕ ಗ್ಯಾರಂಟಿ ಸ್ಥಗಿತ ಎಂದು ಹೇಳಿದ್ದಾರೆ, ಆರ್ ಅಶೋಕ್ ಅವರು ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಇಲ್ಲ ಎಂದು ಹೇಳಿದ್ದಾರೆ. ಇನ್ನು ವಿಜಯೇಂದ್ರ ಅವರು ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಸ್ಥಗಿತ ಎಂದು ಹೇಳಿದ್ದಾರೆ. ಬಿಜೆಪಿ ನಾಯಕರು ಭ್ರಮೆಯಲ್ಲಿದ್ದಾರೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನ ಸಂತೋಷವಾಗಿದ್ದು, ಇದನ್ನು ನಿಲ್ಲಿಸಲು ಬಿಜೆಪಿ ನಾಯಕರು ಬಯಸುತ್ತಿದ್ದಾರೆ. ನಮ್ಮ ಯೋಜನೆಗಳಿಗೆ ಬಜೆಟ್ ನಲ್ಲಿ 58 ಸಾವಿರ ಕೋಟಿ ಅನುದಾನ ಮಿಸಲಿಡಲಾಗಿದೆ. ರಾಜ್ಯದ 7 ಕೋಟಿ ಜನರ ಪೈಕಿ 5.60 ಕೋಟಿ ಜನರಿಗೆ ನಮ್ಮ ಯೋಜನೆ ತಲುಪುತ್ತಿವೆ. ಇದು ಬದಲಾವಣೆಯಲ್ಲವೇ?

ಬಿಜೆಪಿ ನಾಯಕರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅನುದಾನದ ಬಗ್ಗೆ ಮಾತನಾಡುತ್ತಿದ್ದಾರೆ. ಇದೇ ಬೆಳಗಾವಿ ಅಧಿವೇಶನದಲ್ಲಿ SCP-TSP ಕಾಯ್ದೆ ಜಾರಿಗೆ ತಂದು ಜನಸಂಖ್ಯೆ ಅನುಗುಣವಾಗಿ ಈ ಸಮುದಾಯಗಳಿಗೆ ಬಜೆಟ್ ನಲ್ಲಿ ಹಣ ಮೀಸಲಿಡಲು ಆರಂಭಿಸಿದ್ದು ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ. ಈ ವರ್ಷ 39 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದೇವೆ. ಬಡವರು, ಪರಿಶಿಷ್ಟರ ಕಲ್ಯಾಣಕ್ಕೆ ಬಿಜೆಪಿಯ ಬುರುಡೆ ಸರ್ಕಾರ ಒಂದೇ ಒಂದು ತೀರ್ಮಾನ ನೀಡಲಿಲ್ಲ.

ನೀರಾವರಿ ವಿಚಾರದಲ್ಲಿ ಬಿಜೆಪಿ ಬುರುಡೆ:

ಈ ಭಾಗದ ನೀರಾವರಿ ವಿಚಾರವನ್ನು ತೆಗೆದುಕೊಳ್ಳೋಣ. ಈಗಾಗಲೇ 9 ಸಾವಿರ ಕೋಟಿ ಕಾಮಗಾರಿ ಕೈಗೊಂಡಿದ್ದೇವೆ. ಕೃಷ್ಣ ಮೇಲ್ದಂಡೆ ಯೋಜನೆ, ಭದ್ರ ಮೇಲ್ದಂಡೆ ಯೋಜನೆ ಕೈಗೆತ್ತಿಕೊಂಡಿದ್ದು, ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಪರಿಸರ ಇಲಾಖೆ ಅನುಮತಿ ನೀಡದಿದ್ದರೂ ನಾವು ಟೆಂಡರ್ ಕರೆದಿದ್ದೇವೆ. ಬಿಜೆಪಿ ನಾಯಕರಾದ ಶೆಟ್ಟರ್, ಬೊಮ್ಮಾಯಿ ಹಾಗೂ ಜೋಷಿ ಅವರು ಸಂಭ್ರಮಾಚರಣೆ ಮಾಡಿದರು. ಅವರದ್ದು ಕೇವಲ ಬುರುಡೆ ಹಾಗೂ ಖಾಲಿ ಮಾತು. ನಾವು ನುಡಿದಂತೆ ನಡೆದರೆ, ಬಿಜೆಪಿಯವರು ಕೇವಲ ಸುಳ್ಳು ಹೇಳುತ್ತಿದ್ದಾರೆ.

ದೇಶದೆಲ್ಲೆಡೆ ರೈತರು ಬೀದಿಗಿಳಿದು ಹೋರಾಟ ಮಾಡಿ 800 ಮಂದಿ ಸತ್ತರು. ಅವರ ಹೋರಾಟದ ಪರಿಣಾಮ ಕೃಷಿ ಕರಾಳ ಕಾನೂನನ್ನು ಹಿಂಪಡೆದರು. ಆದರೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಅದನ್ನು ಹಿಂಪಡೆಯಲಿಲ್ಲ. ರೈತರ ಪಕ್ಷ ಎಂದು ಹೇಳುತ್ತಿದ್ದ ಜೆಡಿಎಸ್ ಈ ಕಾಯ್ದೆ ಜಾರಿಗೆ ಸಹಕಾರ ನೀಡಿತು. ಈಗ ಅವರಿಬ್ಬರು ಒಂದೇ ತಂಡವಾಗಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 10 ಕ್ಷೇತ್ರ ಗೆಲ್ಲಲಿದ್ದು, 12 ಸ್ಥಾನ ಗೆದ್ದರೂ ಅಚ್ಚರಿ ಇಲ್ಲ. ಅಂತಹ ವಾತಾವರಣ ಇದೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ