ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ದರ್ಶನ್ ಆಂಡ್ ಗ್ಯಾಂಗ್ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯವಾಗಿದ್ದು, ಇದೀಗ ಕೋರ್ಟ್ ಗೆ ಹಾಜರಪಡಿಸಲಾಗಿದೆ.
ದರ್ಶನ್ ಆಂಡ್ ಗ್ಯಾಂಗ್ ಕೋರ್ಟ್ ಗೆ ಬಂದ ಹಿನ್ನಲೆಯಲ್ಲಿ ಕೋರ್ಟ್ ಸುತ್ತಮುತ್ತ ಸಾಕಷ್ಟು ಜನ ಸೇರಿದ್ದು ಬಿಗಿ ಭದ್ರತೆ ಒದಗಿಸಲಾಗಿದೆ. ಇದೀಗ ಕೋರ್ಟ್ ನಲ್ಲಿ ವಾದ-ಪ್ರತಿ ವಾದ ನಡೆಯುತ್ತಿದ್ದು ಪೊಲೀಸರು ದರ್ಶನ್ ಸೇರಿದಂತೆ ಪ್ರಮುಖ ನಾಲ್ವರು ಆರೋಪಿಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಕೇಳಿದ್ದಾರೆ.
ಎಸ್ ಪಿಪಿ ಪ್ರಸನ್ನ ಕುಮಾರ್ ಮತ್ತೆ ಹೆಚ್ಚಿನ ವಿಚಾರಣೆಗೆ ದರ್ಶನ್, ವಿನಯ್, ಪ್ರದೂಷ್, ಲಕ್ಷ್ಮಣ್ ಮತ್ತು ನಾಗರಾಜ್ ರನ್ನು ಪೊಲೀಸ್ ಕಸ್ಟಡಿಗೆ ನೀಡಲು ಮನವಿ ಮಾಡಿದ್ದಾರೆ. ಇದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೀಗ ಪವಿತ್ರಾ ಗೌಡ ಸೇರಿ 10 ಮಂದಿಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಲಾಗಿದೆ.
ಇನ್ನು, ಕೋರ್ಟ್ ಗೆ ಹಾಜರಾದ ದರ್ಶನ್ ಮತ್ತು ಎಲ್ಲಾ ಆರೋಪಿಗಳಿಗೆ ನ್ಯಾಯಾಧೀಶರು ಎಂದಿನಂತೆ ಪ್ರಶ್ನೆ ಮಾಡಿದ್ದಾರೆ. 9 ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಪೊಲೀಸರು ನಿಮಗೆ ತೊಂದರೆ ಕೊಟ್ಟಿದ್ದಾರೆಯೇ ಎಂದು ಪ್ರತಿಯೊಬ್ಬ ಆರೋಪಿಯನ್ನೂ ಪ್ರತ್ಯೇಕವಾಗಿ ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಎಲ್ಲಾ ಆರೋಪಿಗಳು ಇಲ್ಲ ಎಂದು ಉತ್ತರಿಸಿದ್ದಾರೆ.