ಮೈಸೂರು : ಈ ಬಾರಿಯ ನಾಡಹಬ್ಬ ದಸರಾ ಉದ್ಘಾಟನೆಯನ್ನು ಹಂಸಲೇಖ ಅವರು ನೆರವೇರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಜಿಲ್ಲೆಯ ಪ್ರವಾಸದಲ್ಲಿರುವ ಅವರು ಹರಕೆ ತೀರಿಸಲು ಚಾಮುಂಡಿ ಬೆಟ್ಟಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಆಗಮಿಸಿದ್ದರು. ಬಳಿಕ ಚಾಮುಂಡೇಶ್ವರಿಗೆ ರೇಷ್ಮೆ ಸೀರೆ ಒಪ್ಪಿಸಲಾಯಿತು. ಗ್ಯಾರಂಟಿ ಕಾರ್ಡ್ ವಿಚಾರವಾಗಿ ಹರಕೆ ಮಾಡಲಾಗಿತ್ತು. ಈ ವಿಚಾರವಾಗಿ ಪೂಜೆ ಸಲ್ಲಿಸಿದ ಬಳಿಕ ಚಾಮುಂಡಿ ದೇವಿಯ ಮುಂಭಾಗ ಸಿಎಂ ಹಾಗೂ ಡಿಸಿಎಂ ಈಡುಗಾಯಿ ಒಡೆದರು.
ಬಳಿಕ ಸಿದ್ದರಾಮಯ್ಯ ಅವರು ಡಿ.ಕೆ ಶಿವಕುಮಾರ್ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದರು. ವಿರೋಧ ಪಕ್ಷಗಳು ನಮ್ಮನ್ನ ಎಷ್ಟು ದೂರ ಮಾಡಲು ಯತ್ನ ಮಾಡಿತ್ತಿದ್ದಾರೋ ನಾವಿಬ್ಬರು ಅಷ್ಟು ಹತ್ತಿರವಾಗುತ್ತಿದ್ದೇವೆ. ವಿರೋಧ ಪಕ್ಷಗಳು ನಮ್ಮಿಬ್ಬರ ಸಂಬಂಧದ ವಿಚಾರದ ಬಗ್ಗೆ ಮಾತನಾಡುತ್ತಲೇ ಇರಲಿ. ನಾವು ಮಾತ್ರ ಸದಾ ಒಟ್ಟಾಗಿರುವುದನ್ನ ನೀವು ನೋಡುತ್ತಲೇ ಇರುತ್ತೀರಿ ಎಂದಿದ್ದಾರೆ.