ಸಂದೇಶ್ ಖಲಿಯಲ್ಲಿ ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಾಯಕ ಶೇಖ್ ಶಾಜಹಾನ್ ನನ್ನು ಬಂಧಿಸಲು ತೆರಳಿದ್ದ ವೇಳೆ ಇಡಿ ಅಧಿಕಾರಿಗಳ ಮೇಲೆ 200 ಜನರ ಗುಂಪೊಂದು ಶುಕ್ರವಾರ ಭೀಕರ ದಾಳಿ ನಡೆಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಮತ್ತೊಬ್ಬ ಟಿಎಂಸಿ ನಾಯಕ ಕುನಾಲ್ ಘೋಷ್ ಪ್ರತಿಕ್ರಿಯೆ ನೀಡಿದ್ದು, ಇಡಿ ಅಧಿಕಾರಗಳ ಮೇಲೆ ನಡೆದ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಕೇಂದ್ರ ತನಿಖಾ ತಂಡಗಳು ಬಿಜೆಪಿಯಿಂದ ನಿರ್ದೇಶನ ಪಡೆದು ಟಿಎಂಸಿ ನಾಯಕರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದೆ. ನಾವು ನಿರಂತರವಾಗಿ ಇಲ್ಲ ಸಲ್ಲದ ಆರೋಪಗಳನ್ನು ಎದುರಿಸಬೇಕಾಗಿದೆ. ಸುವೇಂದು ಅಧಿಕಾರಿ ಒಬ್ಬ ಕಳ್ಳ ಎಂದು ಬಿಜೆಪಿ ನಾಯಕರೇ ಹೇಳಿದ್ದರು. ಆದರೆ ಅವರ ಮನೆಯ ಮೇಲೆ ದಾಳಿ ನಡೆದಿಲ್ಲ. ಸತತವಾಗಿ ಟಿಎಂಸಿ ನಾಯಕರನ್ನೇ ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದು ಕುನಾಲ್ ಹೇಳಿದ್ದಾರೆ.
ಬಿಜೆಪಿ ಮುಖ್ಯಸ್ಥ ಸುಕಾಂತ್ ಮಜುಂದಾರ್ ಪ್ರತಿಕ್ರಿಯಿಸಿ, ರೋಹಿಂಗ್ಯಾಗಳಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಭ್ರಷ್ಟಾಚಾರದ ಆರೋಪಿಯೇ ಸ್ವತಃ ಅಧಿಕಾರಿಗಳ ಮೇಲೆ ದಾಳಿ ನಡೆಸುವುದು ಟಿಎಂಸಿ ನಾಯಕರ ವರ್ತನೆಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.