ಮೈಸೂರಲ್ಲಿ ಪ್ರವಾಸಿಗರ ದಂಡು, ಪ್ರವಾಸಿ ತಾಣಗಳಲ್ಲಿ ಭಾರೀ ಜನಜಂಗುಳಿ!

ಭಾನುವಾರ, 3 ಅಕ್ಟೋಬರ್ 2021 (14:25 IST)
ಮೈಸೂರು, ಅ 03 :  ಮೈಸೂರಲ್ಲಿ ದಸರಾ ಸಂಭ್ರಮ ಕಳೆಗಟ್ಟಿದ್ದು, ಕೊರೊನಾ ಸಂಕಷ್ಟದ ಕಾಲದ ಮಧ್ಯೆ ಆಚರಿಸಲಾಗುತ್ತಿರುವ ದಸರೆಯ ಸಂಭ್ರಮದೊಂದಿಗೆ ಪ್ರವಾಸೋದ್ಯಮ ಕೂಡ ಚಿಗುರುತ್ತಿದೆ. ಬರೋಬ್ಬರಿ 6 ತಿಂಗಳ ಬಳಿಕ ಮೈಸೂರು ಕಡೆಗೆ ಸಾವಿರಾರು ಪ್ರವಾಸಿಗರು ದೌಡಾಯಿಸಿದ್ದಾರೆ.

ಸೊರಗಿದ್ದ ಪ್ರವಾಸೋದ್ಯಮಕ್ಕೆ ಪ್ರವಾಸಿಗರು ಸಂಜೀವಿನಿಯಾಗಿ ಬಂದಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲೀಗ ದಸರೆಯ ಸಂಭ್ರಮ ಜೋರಾಗಿದ್ದು, ಇದರ ನಡುವೆ ವೀಕೆಂಡ್ ಹಿನ್ನೆಲೆಯಲ್ಲಿ ಮೈಸೂರು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ನಗರಕ್ಕೆ ಪ್ರವಾಸಿಗರು ಬರುತ್ತಿರುವುದು ಪ್ರವಾಸೋದ್ಯಮವನ್ನೇ ನಂಬಿ ಜೀವಿಸುತ್ತಿರೋ ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನತ್ತ ಜನ ಸಾಗರ ಹರಿದುಬರುತ್ತಿದೆ. ಪ್ರವಾಸಿಗರಿಂದ ಅರಮನೆ, ಮೃಗಾಲಯದಲ್ಲಿ ಜನ ದಟ್ಟಣೆ ಹೆಚ್ಚಾಗಿದೆ. ನಾಡ ಹಬ್ಬದ ನೆಪದಲ್ಲಿ ನಗರಕ್ಕೆ ಪ್ರವಾಸಿಗರು ಲಗ್ಗೆ ಇಟ್ಟಿದ್ದು, ಖಾಲಿ ಖಾಲಿಯಾಗಿದ್ದ ಪ್ರವಾಸಿ ತಾಣಗಳು ಈಗ ಭರ್ತಿ ಆಗಿದೆ.
ಕೊರೊನಾದ ಆತಂಕ ಸದ್ಯಕ್ಕೆ ದೂರ ಆಗಿದ್ದರೂ ಅದರ ಭಯ ಮಾತ್ರ ಇನ್ನೂ ಮಾಸಿಲ್ಲ. ಆದರೆ ಕೋವಿಡ್ ಸಂಖ್ಯೆಯಲ್ಲಿ ಕೊಂಚ ಕಡಿಮೆಯಾಗಿದ್ದೇ ತಡ ಜನರು ಕೊರೊನಾ ಮರೆತು ಸಾವಿರಾರು ಸಂಖ್ಯೆಯಲ್ಲಿ ಜಮಾವಣೆ ಗೊಂಡಿದ್ದಾರೆ.
ಅಕ್ಟೋಬರ್ 7ರಂದು 2021ನೇ ಸಾಲಿನ ದಸರಾಕ್ಕೆ ಚಾಲನೆ ಸಿಗಲಿದೆ. ದಸರಾ ಆರಂಭ ಇನ್ನೂ ಒಂದು ವಾರ ಇರವ ಮೊದಲೇ ಪ್ರವಾಸಿಗರ ದಂಡು ಹೆಚ್ಚಿದ್ದು ಸಾಮಾಜಿಕ ಅಂತರ ಮಂಗ ಮಾಯವಾಗಿದೆ.
ಬೇರೆ ರಾಜ್ಯಗಳಿಂದಲೂ ಜನ ಕರ್ನಾಟಕದ ಹಲವು ಜಿಲ್ಲೆಗಳು ಸೇರಿ ಪಕ್ಕದ ರಾಜ್ಯಗಳಿಂದಲೂ ಪ್ರವಾಸಿಗರ ಆಗಮನವಾಗಿದೆ. ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದ ಹೆಚ್ಚು ಪ್ರವಾಸಿಗರು ಆಗಮಿಸಿದ್ದಾರೆ. ಅಂತರ ರಾಜ್ಯ ಪ್ರವಾಸಿಗರನ್ನು ಕೇಳುವವರೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಮಾಜಿಕ ಅಂತರ ಮರೆತು ಗುಂಪು ಗುಂಪಾಗಿ ಪ್ರವಾಸಿಗರು ತಿರುಗಾಡುತ್ತಿದ್ದಾರೆ.
ಇನ್ನು ಹೆಚ್ಚಾಗಿ ಜನರು ಅಂಬಾವಿಲಾಸ ಅರಮನೆ ಹಾಗೂ ಮೃಗಾಲಯಕ್ಕೆ ಲಗ್ಗೆ ಇಟ್ಟಿದ್ದಾರೆ. ಕೊರೊನಾ ಆರಂಭ ಆದಾಗಿನಿಂದಲೂ ಇಷ್ಟು ಜನ ಸೇರಿರಲಿಲ್ಲ. ಆದರೆ ಈಗ ಕೋವಿಡ್ ಸಂಖ್ಯೆ ಕೊಂಚ ಕಡಿಮೆ ಆಗಿದೆ ಅನ್ನೋ ಸುಳಿವು ಸಿಗುತ್ತಿದ್ದಂತೆ ಮೈಸೂರು ಕಡೆಗೆ ಪ್ರವಾಸಿಗರು ಹೆಜ್ಜೆಹಾಕಿದ್ದಾರೆ. ಚಾಮುಂಡಿ ಬೆಟ್ಟ, ಕೆಆರ್ಎಸ್ ಕಡೆಗೂ ಜನ ಹೋಗುತ್ತಿದ್ದಾರೆ.
ವ್ಯಾಪಾರಸ್ಥರು ಖುಷ್ ಮೈಸೂರು ಹೇಳಿ ಕೇಳಿ ಪ್ರವಾಸೋದ್ಯಮವನ್ನೇ ನಂಬಿಕೊಂಡು ಬದುಕುತ್ತಿರುವ ಊರು. ಕೊರೊನಾ ಹೊಡೆತಕ್ಕೆ ಮೈಸೂರು ಅಕ್ಷರಶಃ ನಲುಗಿತ್ತು. ಅದನ್ನೇ ನಂಬಿ ಬದುಕುತ್ತಿದ್ದ ಜನರು ಬೀದಿಗೆ ಬಂದಿದ್ದಾರೆ . ಆದರೆ ಈಗ ಪ್ರವಾಸೋದ್ಯಮ ಚೇತರಿಕೆ ಕಂಡಿದ್ದು, ವ್ಯಾಪಾರ ವಹಿವಾಟು ಆರಂಭ ಆಗಿದೆ. ಇದರಿಂದಾಗಿ ಹಲವು ಜನರ ಬದುಕು ಸುಧಾರಣೆ ಕಂಡಿದೆ.
ಅರಮನೆ ಹಾಗೂ ಮೃಗಾಲಯದಲ್ಲಿ ಸೆಲ್ಫಿ ಗೆ ಜನರು ಮುಗಿಬಿದಿದ್ದಾರೆ. ಜೋಡಿಹಕ್ಕಿಗಳು ಬಗೆ ಬಗೆಯ ಪೋಸ್ ಜತೆ ಫೋಟೋ ತೆಗೆಸಿಕೊಂಡು ಸಂತಸ ಪಡುತ್ತಿದ್ದಾರೆ. ಶನಿವಾರ ಗಾಂಧಿ ಜಯಂತಿ ರಜೆ, ಇಂದು ಭಾನುವಾರ ಸರಣಿ ರಜೆ ಸಿಕ್ಕ ಹಿನ್ನಲೆಯಲ್ಲಿ ಪ್ರವಾಸಿಗರ ಸಂಖ್ಯೆ ಸಹ ಮೈಸೂರಿನಲ್ಲಿ ಹೆಚ್ಚಾಗಿದೆ.
ಮೈಸೂರಿಗೆ ಹೆಚ್ಚು ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜನರ ಮೇಲೆ ತೀವ್ರ ನಿಗಾವಹಿಸಿದ್ದಾರೆ. ಪೊಲೀಸರು ಮಫ್ತಿಯಲ್ಲಿ ತಿರುಗುತ್ತಿದ್ದು, ಅನುಮನ ಬಂದವರ ವಿಚಾರಣೆ ಮಾಡುತ್ತಿದ್ದಾರೆ.
ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಚ್ಚರ ವಹಿಸಿದ್ದಾರೆ. ಪೊಲೀಸರು ಸಂಜೆ 6ರಿಂದ 11ರವರೆಗೆ ನೈಟ್ ಬೀಟ್ ನಡೆಸಲಿದ್ದು, ಇಡೀ ನಗರವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ವ್ಯವಸ್ಥೆಯನ್ನು ಮಾಡಲಾಗಿದೆ. ಅಕ್ಟೋಬರ್ 7 ರಿಂದ 15ರ ತನಕ ಈ ಬಾರಿಯ ದಸರಾ ಮಹೋತ್ಸವ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ