ಮೈಸೂರು ದಸರಾದಲ್ಲಿ ನೀರಜ್ ಚೋಪ್ರಾ..!

ಬುಧವಾರ, 29 ಸೆಪ್ಟಂಬರ್ 2021 (13:26 IST)
ಮೈಸೂರು, ಸೆ. 29 : ದಸರಾ ಮಹೋತ್ಸವದ ದೀಪಾಲಂಕಾರದಲ್ಲಿ ಈ ಬಾರಿ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಅವರ ಪ್ರತಿಕೃತಿ ವಿಶೇಷ ಗಮನ ಸೆಳೆಯಲಿದೆ.

ದಸರಾ ವೇಳೆ ದೀಪಾಲಂಕಾರವನ್ನು ಆಕರ್ಷಣೀಯವಾಗಿಸಲು 100 ಕಿ.ಮೀ.ನಷ್ಟು ರಸ್ತೆ, ವೃತ್ತಗಳನ್ನು ವಿದ್ಯುತ್ ದೀಪಾಲಂಕಾರಗೊಳಿಸಲಾಗುತ್ತಿದೆ.
ಕೊರೊನಾ ಹಿನ್ನೆಲೆಯಲ್ಲಿ ಕಳೆದ ಬಾರಿ 60 ಕಿ.ಮೀ.ನಷ್ಟು ದೀಪಾಲಂಕಾರ ಮಾಡಲಾಗಿತ್ತು. ಈ ಬಾರಿ ಸೋಂಕು ಇಳಿಮುಖವಾಗಿರುವುದರಿಂದ ನಗರ ವ್ಯಾಪ್ತಿಯ ಸುಮಾರು 100 ಕಿ.ಮೀ. ದೀಪಾಲಂಕಾರ ಮಾಡಲು ಸರಕಾರ ನಿರ್ಧರಿಸಿದೆ. 121 ರಸ್ತೆಗಳು, 50 ವೃತ್ತಗಳಿಗೆ ದೀಪಾಲಂಕಾರ ಮಾಡುವ ಕಾರ್ಯ ಮೈಸೂರಿನಾದ್ಯಂತ ಭರದಿಂದ ಸಾಗಿದೆ.ಪ್ರತಿಯೊಂದು ವೃತ್ತಗಳಲ್ಲಿ ಹೊಸ ವಿನ್ಯಾಸದ ಪ್ರತಿಕೃತಿ ನಿರ್ಮಿಸುವ ಕೆಲಸ ನಡೆದಿದೆ.
ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ನಗರದ ವಿವಿಧ ರಸ್ತೆ ಮತ್ತು ವೃತ್ತಗಳಲ್ಲಿ ಭಾರತದ ಭೂಪಟ, ಸ್ವಾತಂತ್ರ್ಯ ಹೋರಾಟಗಾರರು, ದೇಶದ ನಾಯಕರು, ಮೈಸೂರು ಅರಮನೆ, ವಿಷ್ಣು, ಶ್ರೀಕೃಷ್ಣ ರಥ, ಸುತ್ತೂರು ಮಠದ ಶ್ರೀ ರಾಜೇಂದ್ರ ಸ್ವಾಮೀಜಿ ಅವರ ಪ್ರತಿಕೃತಿ ವಿಶೇಷವಾಗಿರಲಿವೆ.
ಜತೆಗೆ, ನಗರದ ಎಲ್ಐಸಿ ಕಚೇರಿ ವೃತ್ತದಲ್ಲಿ ವಿವಿಧ ಪ್ರಾಣಿಗಳ ಕಲಾಕೃತಿಗಳು ಮತ್ತು ಚಾಮುಂಡಿ ಬೆಟ್ಟದಲ್ಲಿ ಸ್ವಾಗತ ಕೋರುವ ವಿದ್ಯುತ್ ದೀಪಾಲಂಕಾರ ಕೆಲಸ ನಡೆಯುತ್ತಿದೆ. ಈ ಬಾರಿ ಒಟ್ಟು 24 ಪ್ರತಿಕೃತಿಗಳು ಜನರ ಗಮನ ಸೆಳೆಯಲಿವೆ.
ಈಗಾಗಲೇ ಬೆಂಗಳೂರು ರಸ್ತೆ, ಅಂಬೇಡ್ಕರ್ ವೃತ್ತ, ಸಯ್ಯಾಜಿರಾವ್ ರಸ್ತೆ, ಹಾರ್ಡಿಂಜ್ ವೃತ್ತ, ಕೆ.ಆರ್.ವೃತ್ತ, ಬಸವೇಶ್ವರ ವೃತ್ತ ಮತ್ತು ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರ ಮಾಡಲಾಗಿದ್ದು, ಉಳಿದ ರಸ್ತೆ ಮತ್ತು ವೃತ್ತಗಳಲ್ಲಿ ದೀಪಗಳ ಅಲಂಕಾರ ಮಾಡಲು ರಸ್ತೆಯ ಎರಡೂ ಬದಿಯಲ್ಲಿ ಮರದ ಕಂಬಗಳನ್ನು ನೆಡಲಾಗುತ್ತಿದೆ.
ಅ.7ರಂದು ಸಯ್ಯಾಜಿರಾವ್ ರಸ್ತೆಯಲ್ಲಿರುವ ಹಸಿರು ಚಪ್ಪರದಲ್ಲಿ ದಸರಾ ದೀಪಾಲಂಕಾರ ಉದ್ಘಾಟನೆಗೊಳ್ಳಲಿದ್ದು, ನಿತ್ಯ ರಾತ್ರಿ 7ರಿಂದ 9.30ರವರೆಗೆ ದೀಪಾಲಂಕಾರ ಇರಲಿದೆ. ಅ.17ರಂದು ದೀಪಾಲಂಕಾರ ಮುಕ್ತಾಯವಾಗಲಿದೆ.
ಕೊರೊನಾ ಹಿನ್ನೆಲೆಯಲ್ಲಿ ದಸರಾದಲ್ಲಿ ಮತ್ತೊಂದು ಆಕರ್ಷಣೆಯಾಗಿದ್ದ ಫಲಪುಷ್ಪ ಪ್ರದರ್ಶನವೂ ಈ ಬಾರಿ ಸ್ಥಗಿತಗೊಂಡಿದೆ. ದಸರಾ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದ ಕುಪ್ಪಣ್ಣ ಉದ್ಯಾನದಲ್ಲಿ ಸಾವಿರಾರು ಹೂ ಬಳ್ಳಿ ಹಾಗೂ ಅಲಂಕಾರಿಕ ಗಿಡ ಆಕರ್ಷಿಸುತ್ತಿದ್ದವು. ನಾನಾ ಬಗೆಯ ಪುಷ್ಪ, ತರಕಾರಿ, ಹೂವು, ಗಿಡಗಳನ್ನು ಕಣ್ತುಂಬಿಕೊಳ್ಳಲು ಜನರು ಮುಗಿಬೀಳುತ್ತಿದ್ದರು.
ಸಂಜೆ ವೇಳೆ ಮನತಣಿಸಿಕೊಂಡು ಮೊಬೈಲ್ಗಳಲ್ಲಿ ಸೆಲಿ ಕ್ಲಿಕ್ಕಿಸಿ ಖುಷಿ ಪಡುತ್ತಿದ್ದರು. ಈ ಫಲಪುಷ್ಪ ಪ್ರದರ್ಶನಕ್ಕೆಂದು 10-15 ಜಾತಿಯ 60-70 ಸಾವಿರ ಬಣ್ಣ ಬಣ್ಣದ ಹೂ ಮತ್ತು ಅಲಂಕಾರಿಕ ಗಿಡಗಳನ್ನು ಬೆಳೆಸಲಾಗುತ್ತಿತ್ತು. ಸರಳ ದಸರಾ ಆಚರಣೆ¬ಂದ ಸಡಗರ ಸಂಭ್ರಮವಿಲ್ಲದೆ ಪುಷ್ಪಉದ್ಯಾನ ಕಳೆಗುಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ