ಕಸ ವಿಲೇವಾರಿ ಘಟಕಕ್ಕೆ ಪಟ್ಟಣ ಪಂಚಾಯತಿ ಅಧ್ಯಕ್ಷರ ಭೇಟಿ: ಗ್ರಾಮಸ್ಥರ ಪ್ರತಿಭಟನೆ ಮುಂದೂಡಿಕೆ

ಶುಕ್ರವಾರ, 31 ಡಿಸೆಂಬರ್ 2021 (15:04 IST)
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರದ ಕಸ ವಿಲೇವಾರಿ ಘಟಕಕ್ಕೆ ಕುಶಾಲನಗರ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯವರ್ಧನ್ ಭೇಟಿ ನೀಡಿ, ಪ್ರತಿಭಟನೆಗೆ ಮುಂದಾಗಿದ್ದವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆವರಣದಲ್ಲಿ ನೂತನ ತಂತ್ರಜ್ಞಾನದ ಯಂತ್ರಗಳನ್ನು ಅಳವಡಿಕೆ ಮಾಡಿ ಕಸ ವಿಲೇವಾರಿ ಮಾಡುವುದರಿಂದ ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆಗಳಾಗುವುದಿಲ್ಲ‌ ಎಂದು ಹೇಳಿದ್ದ ಅಧಿಕಾರಿಗಳು ನುಡಿದಂತೆ‌ ನಡೆದಿಲ್ಲ ಎಂದು ಆರೋಪಿಸಿ ಸೀಗೆಹೊಸೂರು‌ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದರು.
ಪ್ರತಿಭಟನೆಗೆ ಗ್ರಾಮಸ್ಥರು ಸಿದ್ಧತೆ ಮಾಡಿಕೊಳ್ಳುತ್ತಿರುವ ವಿಷಯ ಅರಿತ ಕುಶಾಲನಗರ ಪಟ್ಟಣ ಪಂಚಾಯತಿ ಅಧ್ಯಕ್ಷ ಜಯವರ್ಧನ್ (ಕೇಶವ), ಸ್ಥಾಯಿ ಸಮಿತಿಯ ಅಧ್ಯಕ್ಷ ಸುರೇಶ್ ಸದಸ್ಯರ ಅಮೃತರಾಜ್ ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಸ್ಧಳಕ್ಕೆ ಭೇಟಿ ನೀಡಿ, ನಾಳೆಯಿಂದಲೇ (ಶುಕ್ರವಾರ) ದಿಂದ 64 ಲಕ್ಷ ರೂ. ವೆಚ್ಚದಲ್ಲಿ ನೂತನ ವೈಜ್ಞಾನಿಕ ಕಸ ವಿಲೇವಾರಿ ವ್ಯವಸ್ಥೆ ಕಾಮಗಾರಿ ಪ್ರಾರಂಭಿಸುತ್ತಿರುವುದಾಗಿ ಗ್ರಾಮಸ್ಥರಿಗೆ ಮನವರಿಕೆ ಮಾಡಿದರಲ್ಲದೆ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.
ಅಧ್ಯಕ್ಷರ ಮನವಿ ಮೇರೆಗೆ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಮುಂದೂಡುವುದಾಗಿ ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯರಾದ ಅನಂತ, ಚಂದ್ರು, ಜಯಶೀಲಾ, ಟಿ. ಪಿ.ಹಮೀದ್, ಅರುಣರಾವ್, ರೈತ ಮುಖಂಡ ನಂಜುಂಡ ಸ್ವಾಮಿ, ದೇವಪ್ಪ, ರೇವಣ್ಣ, ನಾಗರಾಜ್, ಸುರೇಶ್ ಮತ್ತಿತರರು ತಿಳಿಸಿದರು.
ವೈಜ್ಞಾನಿಕ ಕಸ ವಿಲೇವಾರಿ ಯೋಜನೆ ಕಾಮಗಾರಿಯ ಮೊದಲ ಹಂತವಾಗಿ ಕಸ ವಿಲೇವಾರಿ ಘಟಕಕ್ಕೆ ಹೋಗುವ ದಾರಿ ಮತ್ತು ಪ್ರಾಥಮಿಕ ಕಾಮಗಾರಿಯ ಕೆಲಸವನ್ನು ಕುಶಾಲನಗರ ಪಟ್ಟಣ ಪಂಚಾಯತಿ ವತಿಯಿಂದ ಗುರುವಾರದಿಂದಲೇ ಪ್ರಾರಂಭಿಸಲಾಗಿದೆ.
ಪಟ್ಟಣ ಪಂಚಾಯತಿ ಆರೋಗ್ಯ ಅಧಿಕಾರಿ ಉದಯ ಕುಮಾರ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ