ಟ್ವಿಟರ್ ಸಿಇಒ ಹುದ್ದೆ ರಾಜೀನಾಮೆಗೆ ಸಿದ್ದ- ಇಲಾನ್ ಮಸ್ಕ್
ನ್ಯೂಯಾರ್ಕ್ ಟ್ವಿಟರ್ ಸಿಇಒ ಸ್ಥಾನದಿಂದ ಕೆಳಗಿಳಿಯುವುದಾಗಿ ಇಲಾನ್ ಮಸ್ಕ್ ಘೋಷಿಸಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ. 'ಯಾರಾದರೊಬ್ಬರು ನನ್ನ ಕೆಲಸವನ್ನು ತೆಗೆದುಕೊಳ್ಳುವಷ್ಟು ಮೂರ್ಖರು ಎಂದು ಕಂಡು ಬಂದ ತಕ್ಷಣ ನಾನು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ' ಮಸ್ಕ್ ಹೇಳಿದ್ದಾರೆ. ಹುದ್ದೆ ತೊರೆದ ನಂತರ ನಾನು ಸಾಫ್ಟ್ ವೇರ್ ತಂಡಗಳನ್ನು ಮುನ್ನಡೆಸುತ್ತೇನೆ' ಎಂದು ಕೂಡ ಹೇಳಿದ್ದಾರೆ. ಮಸ್ಕ್ ಸಿಇಒ ಸ್ಥಾನದಿಂದ ಕೆಳಗಿಳಿಯುವುದು ಸೂಕ್ತವೆಂದು ಹೆಚ್ಚಿನ ಬಳಕೆದಾರರು ಸಮೀಕ್ಷೆಯಲ್ಲಿ ಮತ ಚಲಾಯಿಸಿರುವುದರಿಂದ ಅವರು ಈ ನಿರ್ಧಾರ ಮಾಡಿದ್ದಾರೆ. ಟ್ವಿಟರ್ ಮಾಲೀಕತ್ವ ಪಡೆದ ಎರಡು ತಿಂಗಳಲ್ಲೇ ಕೋಟ್ಯಧಿಪತಿ ಮಸ್ಕ್ ಅವರಿಗೆ ಇದೊಂದು ಭಾರಿ ಹಿನ್ನಡೆ ಎನ್ನಲಾಗುತ್ತಿದೆ. ಭಾನುವಾರ ಸಂಜೆ ಆರಂಭವಾದ ಈ ಸಮೀಕ್ಷೆಯಲ್ಲಿ 1.75 ಕೋಟಿ ಬಳಕೆದಾರರು ಪಾಲ್ಗೊಂಡು ಮತ ಚಲಾಯಿಸಿದ್ದಾರೆ. ಟ್ವಿಟರ್ ಸಿಇಒ ಸ್ಥಾನವನ್ನು ಮಸ್ಕ್ ತೊರೆಯಬೇಕೆಂಬುದರ ಪರವಾಗಿ ಶೇ 57.5ರಷ್ಟು ಬಳಕೆದಾರರು ಮತ ಚಲಾಯಿಸಿದರೆ, ಶೇ 42.5ರಷ್ಟು ಬಳಕೆದಾರರು ಸಿಇಒ ಸ್ಥಾನ ತೊರೆಯಬಾರದೆಂದು ಮತ ಚಲಾಯಿಸಿದ್ದರು. 17,502,391 ಬಳಕೆದಾರರು ಮತ ಚಲಾಯಿಸಿದ್ದರು. ಈ ಸಮೀಕ್ಷೆಯಲ್ಲಿ ಹೊರಹೊಮ್ಮುವ ಫಲಿತಾಂಶಕ್ಕೆ ಬದ್ಧವಾಗಿರುವುದಾಗಿಯೂ ಅವರು ಘೋಷಿಸಿದ್ದರು..