ಬೆಂಗಳೂರು ನಗರದಲ್ಲೂ ಕೂಡ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಬಯಲುಸೀಮೆ ಕೋಲಾರದಲ್ಲಿ ಅಕಾಲಿಕ ಮಳೆಯಾಗಿದೆ. ಬೆಳಗ್ಗೆಯಿಂದ ಹಲವೆಡೆ ತುಂತುರು ಮಳೆ, ಕೆಲವೆಡೆ ಮೋಡ ಕವಿದ ವಾತಾವರಣ ಕಂಡುಬಂದಿದೆ. ಕೋಲಾರ, ಮಾಲೂರು, ಬಂಗಾರಪೇಟೆ ತಾಲೂಕಿನಲ್ಲಿ ತುಂತುರು ಮಳೆಯಾದರೆ, ಮುಳಬಾಗಲು, ಶ್ರೀನಿವಾಸಪುರ, ಕೆಜಿಎಫ್ ತಾಲೂಕಿನಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದೆ. ರಾಜ್ಯದಲ್ಲಿ ಬದಲಾದ ವಾತಾವರಣದಿಂದ ಈಗಾಗಲೇ ಹಲವು ಖಾಯಿಲೆಗಳಿಗೆ ಜನ ತುತ್ತಾಗಿದ್ದು, ಕೆಮ್ಮು, ನೆಗಡಿ, ಜ್ವರದಂತಹ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಆತಂಕ ಮೂಡಿದೆ.
ಇಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಚಾಮರಾಜನಗರ, ಕೊಡಗು, ಮೈಸೂರಿನಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆಯನ್ನು ನೀಡಿದೆ. ಇನ್ನೆರಡು ದಿನಗಳಲ್ಲಿ ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ ಮತ್ತು ಛತ್ತೀಸ್‍ಗಢದಲ್ಲಿ ಶೀತ ಗಾಳಿ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.