ಜ.27ರ ಹವಾಮಾನ; ರಾಜ್ಯದಲ್ಲಿಂದು ಹಗುರ ಮಳೆ; ಚಳಿಗೆ ಬೆಸ್ತುಬಿದ್ದ ಜನ

ಗುರುವಾರ, 27 ಜನವರಿ 2022 (21:08 IST)
ಜನವರಿ 27:ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಹೆಚ್ಚಾಗುತ್ತಲೇ ಇದ್ದು, ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ 27 ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಒಣ ಹವೆ ಇರಲಿದೆ.
ಇನ್ನು ಬೆಳಗ್ಗೆ ಚಳಿ ಹೆಚ್ಚಾಗಿರುವ ಹಿನ್ನೆಲೆ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿನ ಚಳಿಗೆ ಜನರು ಹೈರಾಣಾಗಿದ್ದಾರೆ. ಇನ್ನು ಬದಲಾಗುತ್ತಿರುವ ಹವಾಮಾನದಿಂದಾಗಿ ಶೀತ ಸಂಬಂಧಿತ ಜ್ವರಗಳಿಂದ ಜನರು ಬಳಲುತ್ತಿದ್ದಾರೆ.
ಉತ್ತರ ಕರ್ನಾಟಕದ ಬೀದರ್, ವಿಜಯಪುರ, ಕೊಪ್ಪಳ ಜಿಲ್ಲೆಗಳಲ್ಲಿ ದಟ್ಟವಾದ ಇಬ್ಬನಿ ಬೀಳುತ್ತಿದೆ. ಬೆಳಗ್ಗೆ ಮೈನಡುಗುವ ಚಳಿಗೆ ಜನರು ಹೈರಾಣಾಗಿದ್ದರೆ, ಸಂಜೆ ಆಗುತ್ತಿದ್ದಂತೆ ಬೀಸುವ ಶೀತ ಗಾಳಿಗೆ ಜನರು ಬೆಚ್ಚಗೆ ಮನೆಯಲ್ಲಿ ಕುಳಿತುಕೊಂಡಿರುತ್ತಾರೆ. ಉತ್ತರ ಕರ್ನಾಟಕದಲ್ಲಿ ಬೆಳಗ್ಗೆ ದಟ್ಟವಾದ ಮಂಜು ಮತ್ತು ಚಳಿ ಇದ್ದರೆ ಮಧ್ಯಾಹ್ನ ಆಗುತ್ತಿದ್ದಂತೆ ಸೂರ್ಯನ ಬಿಸಿಲು ಬೇಸಿಗೆ ಕಾಲದ ಅನುಭವವನ್ನು ನೀಡುತ್ತಿದೆ.
ಇಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಚಾಮರಾಜನಗರ, ಕೊಡಗು, ಮೈಸೂರಿನಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆಯನ್ನು ನೀಡಿದೆ. ಇನ್ನೆರಡು ದಿನಗಳಲ್ಲಿ ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ ಮತ್ತು ಛತ್ತೀಸ್‌ಗಢದಲ್ಲಿ ಶೀತ ಗಾಳಿ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಬೆಂಗಳೂರು, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ ಮತ್ತು ಮೈಸೂರು ಭಾಗಗಳಲ್ಲಿ ಚಳಿಯ ಪ್ರಮಾಣ 15 ರಿಂದ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇನ್ನು ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ 30 ರಿಂದ 32 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗುತ್ತಿದೆ. ಕೆಲ ಭಾಗಗಳಲ್ಲಿ ಬೆಳಗಿನ ಜಾವ ಮಂಜು ಸಹ ಬೀಳುತ್ತಿದೆ, ಇಬ್ಬನಿ ಸಹಿತ ಚಳಿ ಇರುವುದರಿಂದ ಜನ ಬೆಂಕಿ ಕಾಯಿಸಿಕೊಳ್ಳುವ ಮೊರೆ ಹೋಗಿದ್ದಾರೆ.
 
ಜಿಲ್ಲಾವಾರು ಹವಾಮಾನ ವರದಿ
ಬೆಂಗಳೂರು 27-17, ಮೈಸೂರು 29-18, ಚಾಮರಾಜನಗರ 29-19, ರಾಮನಗರ 29-19, ಮಂಡ್ಯ 30-19, ಬೆಂಗಳೂರು ಗ್ರಾಮಾಂತರ 27-18, ಚಿಕ್ಕಬಳ್ಳಾಪುರ 28-18, ಕೋಲಾರ 28-18, ಹಾಸನ 28-17, ಚಿಕ್ಕಮಗಳೂರು 28-15, ದಾವಣಗೆರೆ 31-18, ಶಿವಮೊಗ್ಗ 32-17, ಕೊಡಗು 27-14, ತುಮಕೂರು 29-18, ಉಡುಪಿ 30-22, ಮಂಗಳೂರು 30-22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಉತ್ತರ ಕನ್ನಡ 31-16, ಧಾರವಾಡ 29-16, ಹಾವೇರಿ 31-17, ಹುಬ್ಬಳ್ಳಿ 31-17, ಬೆಳಗಾವಿ 29-15, ಗದಗ 30-17, ಕೊಪ್ಪಳ 30-19, ವಿಜಯಪುರ 30-18, ಬಾಗಲಕೋಟ 31-18, ಕಲಬುರಗಿ 30-18, ಬೀದರ್ 27-14, ಯಾದಗಿರಿ 30-18, ರಾಯಚೂರ 30-19 ಮತ್ತು ಬಳ್ಳಾರಿ 30-20 ಡಿಗ್ರಿ ಸೆಲ್ಸಿಯಸ್ ಇರಲಿದೆ.
 
ಉತ್ತರ ಭಾರತದಲ್ಲಿ ಶೀತಗಾಳಿ, ಹಿಮಪಾತ
ಇನ್ನೆರಡು ದಿನ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ತೀವ್ರವಾದ ಚಳಿಯ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇಂದು ರಾತ್ರಿ ಉತ್ತರ ಭಾರತವನ್ನು ಅತ್ಯಂತ ದಟ್ಟವಾದ ಮಂಜು ಆವರಿಸುವ ನಿರೀಕ್ಷೆಯಿದೆ. ಹಾಗೇ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಮತ್ತು ಉತ್ತರಪ್ರದೇಶದಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ತೀವ್ರ ಚಳಿ ಉಂಟಾಗಲಿದೆ.
ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಹಗುರ ಮಳೆಯ ಜೊತೆಗೆ ಹಿಮಪಾತ ಆಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು, ಆಂಧ್ರಪ್ರದೇಶದ ಕರಾವಳಿ, ರಾಯಲ್​ಸೀಮಾ, ತಮಿಳುನಾಡು, ಕೇರಳ ಹಾಗೂ ಅಂಡಮಾನ್​ & ನಿಕೋಬಾರ್​​ನಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
 
ಉತ್ತರಪ್ರದೇಶದಲ್ಲಿ ದಟ್ಟವಾದ ಮಂಜಿನ ವಾತಾವರಣ
ಉತ್ತರಪ್ರದೇಶದ ಕಾನ್ಪುರದಲ್ಲಿ ಇಂದು ಕೂಡ ಶೀತಯುತ ಗಾಳಿ ಕಾಣಿಸಿಕೊಂಡಿದೆ. ಹೀಗಾಗಿ ಜನರು ಬೆಂಕಿಯ ಮುಂದೆ ಕುಳಿತು ತಮ್ಮನ್ನು ತಾವು ಬೆಚ್ಚಗಿಡುವ ಪ್ರಯತ್ನದಲ್ಲಿ ನಿರತರಾಗಿದ್ದರು. ಪೂರ್ವ ಉತ್ತರಪ್ರದೇಶದ ಪ್ರತ್ಯೇಕ ಪ್ರದೇಶಗಳಲ್ಲಿ ದಟ್ಟವಾದ ಮಂಜು ವಾತಾವರಣ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅರುಣಾಚಲ ಪ್ರದೇಶದಾದ್ಯಂತ ಲಘು ಮಳೆಯಾಗಿದೆ. ಇಷ್ಟೇ ಅಲ್ಲದೇ, ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ, ಆಂಧ್ರ ಪ್ರದೇಶ ಕರಾವಳಿ, ತಮಿಳುನಾಡು ಹಾಗೂ ಬಿಹಾರದ ಬಹುತೇಕ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.
ರಾಷ್ಟ್ರ ರಾಜಧಾನಿ ನವದೆಹಲಿ, ಉತ್ತರ ಪ್ರದೇಶದ ಪಶ್ಚಿಮ ಭಾಗ, ಹರಿಯಾಣ ಮತ್ತು ಉತ್ತರಾಖಂಡದಲ್ಲಿ ಶೀತಗಾಳಿ ಹೆಚ್ಚಾಗಿ ಬೀಸಿದೆ. ಪಂಜಾಬ್​, ಉತ್ತರ ಪ್ರದೇಶದ ಪಶ್ಚಿಮ ಭಾಗ ಹಾಗೂ ಹರಿಯಾಣದ ಕೆಲ ಭಾಗಗಳಲ್ಲಿ ದಟ್ಟ ಮಂಜು ಕವಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ