ಮೀಸಲಾತಿ ರದ್ದು ಮಾಡಲು ಬಿಜೆಪಿ ಬಿಡುವುದಿಲ್ಲ: ಸುನೀಲ್‍ಕುಮಾರ್

Krishnaveni K

ಬುಧವಾರ, 11 ಸೆಪ್ಟಂಬರ್ 2024 (16:04 IST)
ಬೆಂಗಳೂರು: ತಲತಲಾಂತರದಿಂದ ಮೀಸಲಾತಿ ಮೂಲಕ ಏಳಿಗೆ ಕಂಡ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯವು ಮೀಸಲಾತಿ ರದ್ದತಿ ಕುರಿತ ರಾಹುಲ್ ಗಾಂಧಿಯವರ ಹೇಳಿಕೆಯಿಂದ ಗಾಬರಿ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್‍ಕುಮಾರ್ ಅವರು ತಿಳಿಸಿದರು.

ಚಿಕ್ಕಮಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೆ ಮೀಸಲಾತಿಯನ್ನು ರದ್ದು ಮಾಡಿಬಿಡುತ್ತಿತ್ತೇನೋ ಎಂಬಷ್ಟು ಆತಂಕ ನಿರ್ಮಾಣವಾಗಿದೆ. ಈ ಹೇಳಿಕೆಯನ್ನು ಖಂಡಿಸುತ್ತೇವೆ. ಮೀಸಲಾತಿಯನ್ನು ರದ್ದು ಮಾಡಲು ಬಿಜೆಪಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮೀಸಲಾತಿಗೆ ನಾವು ಇವತ್ತು ಕೂಡ ಬದ್ಧರಿದ್ದೇವೆ. ಅದು ಮುಂದುವರೆಯಲಿದೆ. ರಾಹುಲ್ ಗಾಂಧಿಯವರ ಹೇಳಿಕೆಯನ್ನು ಈ ದೇಶದ ಜನರು ಸಮರ್ಥಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ರಾಹುಲ್ ಅವರು ದೇಶದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಮೀಸಲಾತಿ ವಿರೋಧಿ ಎಂಬ ವಿಷಯವನ್ನು ಇಟ್ಟುಕೊಂಡು ನಾಳೆಯಿಂದ ಇಡೀ ರಾಜ್ಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಯನ್ನು ಮಾಡಲು ಕರೆ ಕೊಡಲಾಗಿದೆ ಎಂದು ಹೇಳಿದರು. ರಾಹುಲ್ ಗಾಂಧಿಯವರು ಅಮೆರಿಕದಿಂದ ವಾಪಸ್ ಬರುವುದರ ಒಳಗೆ ಕಾಂಗ್ರೆಸ್ ಇದಕ್ಕೆ ಪಶ್ಚಾತ್ತಾಪದ ಹೇಳಿಕೆ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ಮೀಸಲಾತಿಗೆ ಸಂಬಂಧಿಸಿ ಕೇವಲ ಮೊಸಳೆಕಣ್ಣೀರನ್ನು ಇಲ್ಲಿನವರೆಗೆ ಕಾಂಗ್ರೆಸ್ ಸುರಿಸಿದೆ. ಸಂವಿಧಾನದ ಕುರಿತು ಕಾಂಗ್ರೆಸ್ ಕೇವಲ ಭಾಷಣ ಮಾಡಿದೆ. ಕೈನಲ್ಲಿ ಸಂವಿಧಾನದ ಪುಸ್ತಕ ಮಾತ್ರ ಹಿಡಿದುಕೊಂಡಿದ್ದರು. ಆದರೆ, ಮನಸ್ಸಿನಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಯನ್ನೇ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ