ಮಲ್ಲೇಶ್ವರದಲ್ಲಿ ದಿನದ 24 ಗಂಟೆ ಸಿಗಲಿದೆ ಲಸಿಕೆ!

ಶುಕ್ರವಾರ, 17 ಸೆಪ್ಟಂಬರ್ 2021 (19:29 IST)
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಏಕಕಾಲಕ್ಕೆ 54 ಕಡೆ ಕೋವಿಡ್ ಲಸಿಕೀಕರಣ, 24/7 ಲಸಿಕಾ ಕೇಂದ್ರದ ಆರಂಭ ಸೇರಿ ವಿವಿಧ ಜನೋಪಯೋಗಿ ಕಾರ್ಯಕ್ರಮಗಳಿಗೆ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಶುಕ್ರವಾರ ಚಾಲನೆ ನೀಡಿದರು. 
 
ವಿಶೇಷವೆಂದರೆ 54 ಕೇಂದ್ರಗಳಲ್ಲಿಯೂ ಲಸಿಕೀಕರಣ ಮಾಡುವ ಕಾರ್ಯ ಒಮ್ಮೆಲೆ ಆರಂಭವಾಯಿತು ಹಾಗೂ ಜನರು ಮಧ್ಯರಾತ್ರಿ ಬೇಕಾದರೂ ಬಂದು ಲಸಿಕೆ ಪಡೆಯುವ ಸೌಲಭ್ಯವುಳ್ಳ ಕೋದಂಡರಾಮಪುರದ ಕಬಡ್ಡಿ ಮೈದಾನದಲ್ಲಿ ಸ್ಥಾಪಿಸಲಾಗಿರುವ 24/7 ಕೋವಿಡ್ ಲಸಿಕಾ ಕೇಂದ್ರಕ್ಕೂ ಸಚಿವರು ಹಸಿರು ನಿಶಾನೆ ತೋರಿಸಿದರು.
 
ಶಾಲಾ ಮಕ್ಕಳಿಗೆ ಸೌಲಭ್ಯ ವಿತರಣೆ: 
 
ಮೊದಲಿಗೆ; ಕ್ಷೇತ್ರದ ವ್ಯಾಪ್ತಿಯ ಸರಕಾರಿ ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಲ್ಯಾಪ್ ಟಾಪ್, ಟ್ಯಾಬ್, ಚಟುವಟಿಕೆ ಆಧರಿತ ಪುಸ್ತಕ ವಿತರಣೆ, ಸ್ಮಾರ್ಟ್ ಬೋರ್ಡ್ ಉದ್ಘಾಟನೆ ಹಾಗೂ ಪ್ರೇರಣಾ ಆಪ್ ಲೋಕಾರ್ಪಣೆ ಕಾರ್ಯಕ್ರಮಗಳನ್ನು ಸಚಿವರು ನೆರೆವೇರಿಸಿದರು. 
 
ಪ್ರಾಥಮಿಕ ಶಾಲಾ ಮಕ್ಕಳಿಗೆ 350 ಲ್ಯಾಪ್ ಟಾಪ್ ಹಾಗೂ ಹೈಸ್ಕೂಲ್ ಮಕ್ಕಳಿಗೆ 1,000 ಟ್ಯಾಬ್ʼಗಳನ್ನು ವಿತರಿಸಿದ ಸಚಿವರು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಂತೆ ಇನ್ನಷ್ಟು ಉಪಕರಣಗಳನ್ನು ಕೊಡುತ್ತಾ ಹೋಗುತ್ತೇವೆ. ಡಿಜಿಟಲ್ ಕಲಿಕೆ ಉದ್ದೇಶದಿಂದ ಎಲ್ಲ ಶಾಲೆಗಳಲ್ಲಿ ಸ್ವಾರ್ಟ್ ಕ್ಲಾಸ್ ರೂಂಗಳನ್ನು ಮಾಡಲಾಗುತ್ತಿದೆ. 
 
ಅಕ್ಟೋಬರ್ 7ಕ್ಕೆ ಪ್ರಧಾನಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ಇಪ್ಪತ್ತು ವರ್ಷ ಆಗುತ್ತದೆ. ಇಂದಿನಿಂದ ಅಂದಿನವರೆಗೂ ಈ ಸೇವಾ ಕಾರ್ಯಕ್ರಮಗಳು ಮುಂದುವರಿಯುತ್ತವೆ. ಮೋದಿ ಅವರ ಪ್ರೇರಣೆಯೊಂದಿಗೆ ನಾವೆಲ್ಲ ಒಳ್ಳೆಯ ಕೆಲಸ ಮಾಡೋಣ. ಈ ಉದ್ದೇಶಕ್ಕಾಗಿ 30 ಕಡೆ ನಮೋ ಆಪ್ ಡೌನ್ಲೋಡ್ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು. 
 
ಮಧ್ಯರಾತ್ರಿ ಬಂದರೂ ಲಸಿಕೆ: 
 
ಕ್ಷೇತ್ರದ ವ್ಯಾಪ್ತಿಯ ಕೋದಂಡರಾಮಪುರದ ಕಬಡ್ಡಿ ಮೈದಾನದಲ್ಲಿ 24/7 ಕೋವಿಡ್ ಲಸಿಕಾ ಕೇಂದ್ರಕ್ಕೂ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ ನೀಡಿದರು. 
 
ದಿನದ 24 ಗಂಟೆ, ವಾರದ 7 ದಿನ ಕಾರ್ಯ ನಿರ್ವಹಿಸುವ ಈ ಕೇಂದ್ರದಲ್ಲಿ ಮಧ್ಯರಾತ್ರಿ ಬಂದರೂ ಲಸಿಕೆ ನೀಡುವ ವ್ಯವಸ್ಥೆ ಇದೆ ಎಂದ ಅವರು, ಇದೊಂದು ವಿಭಿನ್ನ ಪ್ರಯೋಗ. ದೇಶಾದ್ಯಂತ ಮೋದಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಲಸಿಕೀಕರಣದ ಅಂಗವಾಗಿ ಬೆಂಗಳೂರು ನಗರದಲ್ಲೂ ಇಂಥ ಲಸಿಕಾ ಕೇಂದ್ರವನ್ನು ಆರಂಭಿಸಲಾಗಿದೆ ಎಂದರು. 
 
ಬೆಳಗ್ಗೆಯಿಂದ ಸಂಜೆವರೆಗೂ ಅಲ್ಲ, ಮಧ್ಯರಾತ್ರಿ ಬಂದರೂ ನಾವು ಈ ಕೇಂದ್ರದಲ್ಲಿ ಲಸಿಕೆ ನೀಡುತ್ತೇವೆ. ಮೂರು ತಿಂಗಳು ಕಾಲ ಈ ಕೇಂದ್ರ ಕಾರ್ಯನಿರ್ವಹಿಸುತ್ತದೆ. ಅಗತ್ಯವಾದರೆ ಅದರ ಸೇವೆಯನ್ನು ಮತ್ತಷ್ಟು ದಿನ ವಿಸ್ತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. 
 
ಕೇರ್ ಇಂಡಿಯಾ ಸಂಸ್ಥೆಯವರು ಈ ಲಸಿಕಾ ಕೇಂದ್ರಕ್ಕೆ ಅಗತ್ಯವಾದ ಮೂಲಸೌಕರ್ಯ ಒದಗಿಸಿದ್ದಾರೆ. ಬಹಳ ಅಚ್ಚುಕಟ್ಟಾಗಿ ಎಲ್ಲ ವ್ಯವಸ್ಥೆ ಮಾಡಿದ್ದಾರೆ. ಲಸಿಕೆ ಪಡೆದ ನಂತರ ಅರ್ಧ ಗಂಟೆ ಇಲ್ಲಿಯೇ ಉಳಿಯುವವರಿಗೆ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು. 
 
ಮಹಿಳೆಯರಿಗೆ ಪಿಂಕ್ ಬೂತ್: 
 
24/7 ಲಸಿಕೆ ಕೇಂದ್ರಕ್ಕೆ ಬರುವ ಮಹಿಳೆಯರಿಗೆ ಉತ್ತಮ ಸೌಲಭ್ಯ ಕಲ್ಪಿಸಲಾಗಿದೆ. ಪ್ರತ್ಯೇಕ ಪಿಂಕ್ ಬೂತ್ ಮಾಡಲಾಗಿದ್ದು. ಗರ್ಭಿಣಿಯರು, ಚಿಕ್ಕ ಮಕ್ಕಳ ತಾಯಂದಿರು ಯಾರೇ ಬಂದರೂ ಅವರು ಲಸಿಕೆ ಪಡೆದು ಕೆಲವೊತ್ತು ಇಲ್ಲಿಯೇ ಇರುವ ವ್ಯವಸ್ಥೆ ಮಾಡಲಾಗಿದೆ. ಅವರಿಗಾಗಿ ಟೀವಿ, ಪತ್ರಿಕೆ, ಮ್ಯಾಗಝಿನ್ʼಗಳನ್ನು ಇಡಲಾಗಿದೆ ಎಂದು ಸಚಿವರು ತಿಳಿಸಿದರು. 
 
ವಾಹನದಲ್ಲೇ ಲಸಿಕೆ:
ವಯಸ್ಸಾದವರು, ನಡೆಯಲು ಅಶಕ್ತರಾದವರಿಗೆ ಅನುಕೂಲವಾಗಲೆಂದು ಕಾರಿನಲ್ಲಿ‌ ಕೂರಿಸಿ ಲಸಿಕೆ ನೀಡುವ ವ್ಯವಸ್ಥೆ ‌ಕೂಡ‌ ಇಲ್ಲಿ ಮಾಡಲಾಗಿದೆ. ಲಸಿಕಾ ಕೇಂದ್ರಕ್ಕೆ ನೇರವಾಗಿ ವಾಹನದಲ್ಲಿಯೇ ಹೋಗಿ ಲಸಿಕೆ ಹಾಕಿಸಿಕೊಳ್ಳಬಹುದು. ಇದು ವಿಶೇಷ ವಾದ ಕ್ರಮ ಎಂದು ಸಚಿವರು ತಿಳಿಸಿದರು. 
 
ಮೊದಲ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರೂ ಹಾಗೂ ಪರಿಷತ್ತಿನ ಮುಖ್ಯ ಸಚೇತಕರಾದ ಮಹಂತೇಶ ಕವಟಗಿಮಠ, ಶಿಕ್ಷಣ ಫೌಂಡೇಶನ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಶಿಕ್ಷಣ ಫೌಂಡೇಶನ್ ಸಿಇಒ ಪ್ರಸನ್ನ, ಬೆಂಗಳೂರು ಉತ್ತರ ಜಿಲ್ಲೆಯ ಡಿಡಿಪಿಐ ನಾರಾಯಣ್, ಮಲ್ಲೇಶ್ವರ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ, ಬಿಜೆಪಿ ಮಲ್ಲೇಶ್ವರ ಮಂಡಲ ಅಧ್ಯಕ್ಷೆ ಕಾವೇರಿ ಕೇದಾರನಾಥ, ಪಾಲಿಕೆ ಮಾಜಿ ಸದಸ್ಯ ಜಯಪ್ರಕಾಶ್ ಮುಂತಾದವರು ಇದ್ದರು. 
 
ಲಸಿಕಾ ಕೇಂದ್ರ ಉದ್ಘಾಟನೆ ಕಾರ್ಯಕ್ರದಲ್ಲಿ ಸಚಿವರ ಜತೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ ಗುಪ್ತ, ಪಶ್ಚಿಮ ವಿಭಾಗದ ಆಯುಕ್ತ ಬಸವರಾಜ್, ಪಾಲಿಕೆಯ ಮಾಜಿ ಸದಸ್ಯ ಮಂಜುನಾಥ್, ಕೇರ್ ಇಂಡಿಯಾ ಅಧಿಕಾರಿಗಳು, ಪಾಲಿಕೆ ಸಿಬ್ಬಂದಿ ಇದ್ದರು.
education

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ