ಟೂಡಾ ಆಯುಕ್ತ ಹುದ್ದೆ ಮೇಲೆ ಪಶು ವೈದ್ಯನ ಕಣ್ಣು!

ಶನಿವಾರ, 29 ಸೆಪ್ಟಂಬರ್ 2018 (18:41 IST)
ಸಮ್ಮಿಶ್ರ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆಯಾ? ರಾಜಕೀಯ ಪ್ರಭಾವವಿದ್ರೆ ಯಾರ್ ಏನ್ ಬೇಕಾದ್ರು ಆಗಬಹುದಾ? ಎನ್ನುವ ಪ್ರಶ್ನೆಗಳು ಕೇಳಿ ಬರಲಾರಂಭಿಸಿವೆ.

ತುಮಕೂರು ಜಿಲ್ಲೆ ಮಟ್ಟಿಗೆ ಇದು ನಿಜ ಕೂಡಾ ಆಗುವ ಸಾಧ್ಯತೆ ಇದೆ. ಮೂಲತಃ ಪಶು ವೈದ್ಯಾಧಿಕಾರಿಯಾಗಿರುವ ಡಾ. ನಾಗಣ್ಣ ಎಂಬುವರು ಮಾಜಿ ಸಚಿವ ಜಯಚಂದ್ರ ಆಪ್ತ ವಲಯದಲ್ಲಿ ಗುರ್ತಿಸಿಕೊಂಡಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲಿ ತುಮಕೂರು ತಾಲ್ಲೂಕಿನ ತಾಲ್ಲೂಕು ಪಂಚಾಯ್ತಿ ನಿರ್ವಹಣಾಧಿಕಾರಿಯಾಗಿದ್ರು. ಆದರೆ ಪಶು ಇಲಾಖೆಯಲ್ಲಿ ವೈದ್ಯಾಧಿಕಾರಿಗಳೇ ಇಲ್ಲದಿದ್ರೂ ಸಹ ಜಯಚಂದ್ರ ಇವರನ್ನು ಡೆಪ್ಟೇಷನ್ ಮೇಲೆ ತಾಲ್ಲೂಕು ಪಂಚಾಯ್ತಿ ಇ.ಒ ಮಾಡಿದ್ರು.

ಇದಕ್ಕೂ ಮುನ್ನಾ ಜಯಚಂದ್ರ ಅವರ ವಿಶೇಷ ಅಧಿಕಾರಿಯನ್ನಾಗಿ ಮಾಡಿಕೊಂಡಿದ್ರು. ಇದೀಗ ಇದನ್ನೇ ಬಂಡವಾಳ ಮಾಡಿಕೊಂಡ ಡಾ. ನಾಗಣ್ಣ ಈಗ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. 

ರಾಜ್ಯ ಸರ್ಕಾರದಲ್ಲಿ ಸಾಕಷ್ಟು ಜನ ಸಮರ್ಥ ಅಧಿಕಾರಿಗಳಿದ್ದರೂ ಸಹ ನಾಗಣ್ಣನನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಬಹುದು ಎಂಬ ಉದ್ದೇಶದಿಂದ ಟೂಡಾ ಆಯುಕ್ತರಾಗಿ  ನೇಮಕ ಮಾಡಲು ಹೊರಟಿದೆ ಎನ್ನಲಾಗಿದೆ.  ಶತಾಯಗತಾಯ ಆ ಹುದ್ದೆಗೆ ಬರಲೇಬೇಕೆಂದು ಈಗಾಗಲೇ ಉಪ ಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಸಂಸದ ಮುದ್ದಹನುಮೇಗೌಡ್ರಿಂದ ಶಿಪಾರಸ್ಸಿ‌ನ ಪತ್ರ ಕೂಡಾ ಪಡೆದಿದ್ದಾರೆ ಎನ್ನಲಾಗಿದೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ನಾಗಣ್ಣನನ್ನು ಆಯುಕ್ತರ ಹುದ್ದೆಗೆ ನೇಮಕ‌ ಮಾಡಲು ತೆರೆ ಮರೆಯ ಕಸರತ್ತು ನಡೆಯುತ್ತಿದೆ ಎಂಬ ಮಾತುಗಳು ಹರಿದಾಡಲಾರಂಭಿಸಿವೆ. ಗಡಿನಾಡ ಫೌಂಡೇಷನ್ ಅಧ್ಯಕ್ಷ ಯಶೋಧರ ಎಂಬುವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಅವೈಜ್ಞಾನಿಕ ಪದ್ದತಿಯಾಗಿದ್ದು ಜಿಲ್ಲೆಯಲ್ಲಿ ಪಶುಗಳು ರೋಗ ಬಂದು ಸಾಯುತ್ತಿವೆ. ಪಶು ಸಂಗೋಪನೆ ಇಲಾಖೆಯಲ್ಲಿ ವೈದ್ಯರ ಕೊರತೆ ಇದೆ. ಹೀಗಾಗಿ ಡಾ. ನಾಗಣ್ಣ ಮಾತೃ ಇಲಾಖೆಯಲ್ಲಿ ಮುಂದುವರಿಯುವುದು ಸೂಕ್ತ ಎಂದಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ