ದುಬೈ: ಕೇದಾರ್ ಜಾದವ್ ಆಡುವ ಬಳಗದಲ್ಲಿ ಆಯ್ಕೆಯಾಗುತ್ತಿರುವುದರ ಬಗ್ಗೆ ಹಲವು ಈ ಟೂರ್ನಮೆಂಟ್ ನ ಉದ್ದಕ್ಕೂ ಪ್ರಶ್ನಿಸುತ್ತಲೇ ಬಂದಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ತನ್ನ ಮಹತ್ವವೇನೆಂದು ಜಾದವ್ ತೋರಿಸಿಕೊಟ್ಟರು.
ಬಾಂಗ್ಲಾದೇಶ ವಿರುದ್ಧ ನಡೆದ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಅಂತಿಮ ಬಾಲ್ ನಲ್ಲಿ ಗೆಲುವಿನ ರನ್ ಓಡಿದ ಕೇದಾರ್ ಜಾದವ್ ಆಲ್ ರೌಂಡರ್ ಆಟದಿಂದಾಗಿ ಟೀಂ ಇಂಡಿಯಾ 7 ನೇ ಬಾರಿ ಏಷ್ಯಾ ಕಪ್ ಚಾಂಪಿಯನ್ ಆಯಿತು.
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ಅತ್ಯುತ್ತಮ ಆರಂಭವನ್ನೇ ಪಡೆಯಿತು. ಭಾರತದ ವೇಗಿಗಳು ಈ ಪಂದ್ಯದಲ್ಲಿ ಈ ಮೊದಲಿನಂತೆ ಪರಿಣಾಮ ಬೀರದೇ ಇದ್ದಿದ್ದರಿಂದ ಬಾಂಗ್ಲಾ ಬ್ಯಾಟ್ಸ್ ಮನ್ ಗಳು ಬೃಹತ್ ಮೊತ್ತದ ಸೂಚನೆ ನೀಡಿದ್ದರು. ಆದರೆ ಎಂದಿನಂತೆ ಭಾರತದ ನೆರವಿಗೆ ಬಂದಿದ್ದು ಸ್ಪಿನ್ನರ್ ಗಳು. ಕೇದಾರ್ ಜಾದವ್, ಯಜುವೇಂದ್ರ ಚಾಹಲ್, ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಸ್ಪಿನ್ ಮೂಲಕ ಬಾಂಗ್ಲಾವನ್ನು ನಿಯಂತ್ರಿಸಿ 222 ರನ್ ಗಳಿಗೆ ಆಲೌಟ್ ಮಾಡಲು ಯಶಸ್ವಿಯಾದರು.
ಉತ್ತರವಾಗಿ ಉತ್ತಮ ಬ್ಯಾಟಿಂಗ್ ಆರಂಭಿಸಿದರೂ ಶಿಖರ್ ಧವನ್, ಅಂಬುಟಿ ರಾಯುಡು ವಿಕೆಟ್ ಬೇಗನೇ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ನಾಯಕ ರೋಹಿತ್ ಶರ್ಮಾ 48 ರನ್ ಗಳಿಸಿ ಆಸರೆಯಾದರು. ಅವರಿಗೆ ದಿನೇಶ್ ಕಾರ್ತಿಕ್ (37), ಧೋನಿ (36) ಸಾಥ್ ನೀಡಿದರು. ಹಾಗಿದ್ದರೂ ಗೆಲುವಿನ ದಡ ಸೇರಿಸಲು ಅವರಿಂದಾಗಲಿಲ್ಲ.
ಈ ಸಂದರ್ಭದಲ್ಲಿ ಜತೆಯಾದ ಕೇದಾರ್ ಜಾದವ್, ಭುವನೇಶ್ವರ್ ಕುಮಾರ್ ಉತ್ತಮ ಜತೆಯಾಟವಾಡಿದರು. ಈ ಸಂದರ್ಭದಲ್ಲಿ ಭುವಿ ಔಟಾದರೆ, ಮತ್ತೊಂದೆಡೆ ಭಾರತಕ್ಕೆ ಬಾಲ್ ಕೊರತೆಯೂ ಎದುರಾಗಿತ್ತು. ಕೊನೆಯ ಎಸೆತದಲ್ಲಿ ಗೆಲುವಿನ ರನ್ ಬೇಕಾದಾಗ ಅಫ್ಘಾನಿಸ್ತಾನ ಪಂದ್ಯದ ಫಲಿತಾಂಶವನ್ನು ಎಲ್ಲರೂ ನೆನಪಿಸುವಂತಾಯಿತು. ಆದರೆ ತಮ್ಮ ಪ್ಯಾಡ್ ಗೆ ಬಾಲ್ ತಗುಲಿದರೂ ಕಣ್ಣು ಮುಚ್ಚಿ ಒಂಟಿ ರನ್ ಗೆ ಓಡಿದ ಕೇದಾರ್ ಜಾದವ್ ಅಂತಿಮ ಎಸೆತದಲ್ಲಿ ಗೆಲುವು ಕೊಡಿಸಿಯೇಬಿಟ್ಟರು. ಇದರೊಂದಿಗೆ ಭಾರತ ಫೈನಲ್ ಪಂದ್ಯವನ್ನು 3 ವಿಕೆಟ್ ಗಳಿಂದ ಗೆದ್ದು ಏಷ್ಯಾ ಕಪ್ ಚಾಂಪಿಯನ್ ಎನಿಸಿಕೊಂಡಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.