ಏಷ್ಯಾ ಕಪ್ ಫೈನಲ್ ನಲ್ಲಿ ಧೋನಿ ಮಾಡಿದ ಸ್ಟಂಪ್ ಔಟ್ ವಿವಾದದಲ್ಲಿ
ಶನಿವಾರ, 29 ಸೆಪ್ಟಂಬರ್ 2018 (09:03 IST)
ದುಬೈ: ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಪರ ಶತಕ ಸಿಡಿಸಿ ಮಿಂಚಿದ ಲಿಟನ್ ದಾಸ್ ಸ್ಟಂಪ್ ಔಟ್ ಇದೀಗ ವಿವಾದಕ್ಕೀಡಾಗಿದೆ.
ಧೋನಿ ಮಾಡಿದ ಸ್ಟಂಪ್ ಔಟ್ ಬಗ್ಗೆ ಇದೀಗ ಬಾಂಗ್ಲಾ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದು, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಬೀಟ್ ಆದ ಲಿಟನ್ ದಾಸ್ ಮುನ್ನುಗ್ಗಿ ಬಾರಿಸಲು ಹೋಗಿ ಎಡವಿದ್ದರು. ಈ ಸಂದರ್ಭದಲ್ಲಿ ಅವರ ಕಾಲು ಕೊಂಚವೇ ಕ್ರೀಸ್ ನಿಂದ ಹೊರಗಿತ್ತು. ಈ ಸಂದರ್ಭದಲ್ಲಿ ಧೋನಿ ಮಿಂಚಿನಂತೆ ಬೇಲ್ಸ್ ಎಗರಿಸಿ ಸ್ಟಂಪ್ ಔಟ್ ಗೆ ಮನವಿ ಸಲ್ಲಿಸಿದರು.
ಮೈದಾನದಲ್ಲಿ ಅಂಪಾಯರ್ ಗಳು ಥರ್ಡ್ ಅಂಪಾಯರ್ ಗಳಿಗೆ ಮನವಿ ಸಲ್ಲಿಸಿದರು. ವಿವಿದ ಕ್ಯಾಮರಾ ಕೋನಗಳಲ್ಲಿ ನೋಡಿದ ಅಂಪಾಯರ್ ಗಳಿಗೆ ಕೆಲ ಹೊತ್ತು ಔಟ್ ನೀಡಬೇಕೇ ಎನ್ನುವ ಬಗ್ಗೆ ಗೊಂದಲವಾಯಿತು. ಯಾಕೆಂದರೆ ಸ್ಟಂಪ್ ಆಂಗಲ್ ನಿಂದ ನೋಡುವಾಗ ಲಿಟನ್ ದಾಸ್ ಕಾಲು ಕ್ರೀಸ್ ನಲ್ಲಿಯೇ ಇತ್ತು. ಆದರೆ ಇನ್ನೊಂದು ಆಂಗಲ್ ನಿಂದ ನೋಡುವಾಗ ಹೊರಗಿತ್ತು.
ಸಾಮಾನ್ಯವಾಗಿ ಕ್ರಿಕೆಟ್ ನಲ್ಲಿ ಬೆನಿಫಿಟ್ ಆಫ್ ಡೌಟ್ ನ ಲಾಭ ಬ್ಯಾಟ್ಸ್ ಮನ್ ಗೆ ಹೋಗುತ್ತದೆ. ಆದರೆ ಇಲ್ಲಿ ಅಂಪಾಯರ್ ಗಳು ಔಟ್ ಎಂದು ಘೋಷಿಸಿದರು. ಆಗ 121 ರನ್ ಗಳಿಸಿದ್ದ ಲಿಟನ್ ದಾಸ್ ಔಟ್ ಎಂದು ಘೋಷಿಸುತ್ತಿದ್ದಂತೇ ನಂತರ 30 ರನ್ ಗಳಿಸುವಷ್ಟರಲ್ಲಿ ಬಾಂಗ್ಲಾದೇಶ ಆಲೌಟ್ ಆಯಿತು.
ಈ ವಿವಾದಾತ್ಮಕ ತೀರ್ಪಿನ ಬಗ್ಗೆ ಬಾಂಗ್ಲಾ ಅಭಿಮಾನಿಗಳು ಮೈದಾನದಲ್ಲಿಯೇ ಫಲಕಗಳನ್ನು ಹಿಡಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ, ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಯಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.