ಉಡುಪಿನಲ್ಲಿ ಮೀನು ಕದ್ದ ಮಹಿಳೆಗೆ ಮರಕ್ಕೆ ಕಟ್ಟಿ ಹಾಕಿ ಥಳಿಸಿದ ವಿಡಿಯೋ: ಸಿಎಂ ರಿಯಾಕ್ಷನ್ ನೋಡಿ

Sampriya

ಗುರುವಾರ, 20 ಮಾರ್ಚ್ 2025 (14:37 IST)
ಉಡುಪಿ: ಮೀನು ಕಳ್ಳತನದ ಆರೋಪದ ಮೇಲೆ ಮಲ್ಪೆ ಬಂದರಿನಲ್ಲಿ ಮಹಿಳೆಯ ಮೇಲೆ ನಡೆದ ಭೀಕರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಪೊಲೀಸರು ಲಕ್ಷ್ಮಿಬಾಯಿ, ಸುಂದರ್, ಶಿಲ್ಪಾ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇನ್ನೂ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದ ಹಾಗೇ ಭಾರೀ ಆಕ್ರೋಶ ಹೊರಹಾಕಲಾಯಿತು. ಕರ್ನಾಟಕದಂತಹ ಸಂಸ್ಕೃತಿಯುಳ್ಳ ನಾಡಿನಲ್ಲಿ ಈ ಘಟನೆ ನಡೆದಿರುವುದು ನಾಡಿಗೆ ತಕ್ಕುದಾದುದ್ದಲ್ಲ ಎಂದು ಸಿಎಂ ಆಕ್ರೋಶ ಹೊರಹಾಕಿದ್ದಾರೆ.

ಇನ್ನೂ ಈ ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿ ಪೋಸ್ಟ್ ಹಾಕಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸಿಎಂ ಪೋಸ್ಟ್‌ನಲ್ಲಿ ಏನಿದೆ: ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ‌ ಮೀನು ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ತಳಿಸಿದ ವೀಡಿಯೋ ಕಂಡು ದಿಗ್ಭ್ರಮೆಯಾಯಿತು.

ಕಾರಣವೇನೇ ಇರಲಿ  ಒಬ್ಬ ಮಹಿಳೆಯನ್ನು ಈ ರೀತಿ ಕೈಕಾಲು ಕಟ್ಟಿ ಹಲ್ಲೆ ಮಾಡುವುದು ಅಮಾನವೀಯ ಮಾತ್ರವಲ್ಲ, ಗಂಭೀರ ಅಪರಾಧವೂ ಹೌದು.

ಇಂತಹ ಅನಾಗರೀಕ ವರ್ತನೆ ಕರ್ನಾಟಕದಂತಹ ಸುಸಂಸ್ಕೃತ ನಾಡಿಗೆ ತಕ್ಕುದಾದುದ್ದಲ್ಲ.

ಕಳ್ಳತನ, ಮೋಸ, ವಂಚನೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮಕ್ಕೆ ನಮ್ಮಲ್ಲಿ ಪೊಲೀಸ್ ಇಲಾಖೆ, ಕಾನೂನು ವ್ಯವಸ್ಥೆ ಎಲ್ಲವೂ ಇದೆ,
ದೂರು ದಾಖಲಿಸಿದರೆ ಪೊಲೀಸರು ತನಿಖೆ ನಡೆಸಿ, ಕಾನೂನಿನಡಿಯಲ್ಲಿ ಶಿಕ್ಷಿಸಲು ಸಮರ್ಥರಿರುವಾಗ ಹೀಗೆ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳುವುದನ್ನು ಸರ್ಕಾರ ಸಹಿಸುವುದಿಲ್ಲ.

ಈ ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇದೀಗ ಈ ಪ್ರಕರಣ ಸಂಬಂಧ  ಮಲ್ಪೆ ಪೊಲೀಸರು ಲಕ್ಷ್ಮಿಬಾಯಿ, ಸುಂದರ್, ಶಿಲ್ಪಾ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯ ಮೇಲೆ ಮೀನು ಕದ್ದ ಆರೋಪ ಹೊರಿಸಲಾಗಿದ್ದು, ವಿಜಯಪುರ ಜಿಲ್ಲೆಯವರು. ಐಪಿಸಿ ಸೆಕ್ಷನ್ 74, 115, 351, 352 ಮತ್ತು ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.

ಇದು ಉತ್ತರ ಪ್ರದೇಶವಲ್ಲ, ಕರಾವಳಿಯ ಮೀನುಗರಿಕಾ ಬಂದರು ಪ್ರದೇಶ ಮಲ್ಪೆಯಲ್ಲಿ.
ಜಿಲ್ಲಾಡಳಿತ ಏನು ಮಾಡುತ್ತಿದೆ ? @siddaramaiah ರವರೇ ?
ಮೀನು ಕದ್ದ ಆರೋಪದಡಿ ಪರಿಶಿಷ್ಟ ಜಾತಿಯ ಲಂಬಾಣಿ ಜನಾಂಗದ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ತಳಿಸುತ್ತಿದ್ದಾರೆ. pic.twitter.com/AZn2AgnbRq

— ಕರುನಾಡಿನ ಮಿನುಗುವ ನಕ್ಷತ್ರ????❤️ (@NaadaPremiSha) March 19, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ