ಗದಗ: ಇಲ್ಲಿನ ಬೆಟಗೇರಿ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ 6 ವಿದ್ಯಾರ್ಥಿಗಳ ಕೂದಲು ಕಟ್ ಮಾಡಿದ ಶಿಕ್ಷಕನನ್ನು ಪೋಷಕರು ತರಾಟೆಗೆ ತೆಗೆದುಕೊಂಡು, ಅಮಾನತಿಗೆ ಒತ್ತಾಯಿಸಿದ್ದಾರೆ.
ಕಂಪ್ಯೂಟರ್ ಶಿಕ್ಷಕ ಬಿನೋಯ್ ಅವರು ಮಕ್ಕಳ ಕೂದಲು ಕಟ್ ಮಾಡಿ ಉದ್ಧಟತನ ಮೆರೆದಿದ್ದಾರೆ ಎಂದು ಪೋಷಕರು ಆಕ್ರೋಶ ಹೊರಹಾಕಿ, ಬಿಇಒ ಸಮ್ಮುಖದಲ್ಲೇ ಶಿಕ್ಷಕನಿಗೆ ಧರ್ಮದೇಟು ನೀಡಿದರು. ಕೂದಲು ಕಟ್ ಮಾಡುವ ವೇಳೆ ವಿದ್ಯಾರ್ಥಿ ಹಣೆಗೆ ಗಾಯವಾಗಿದ್ದು, ಏನಾದ್ರೂ ಆದರೆ ಏನು ಮಾಡುವುದು ಎಂದು ಪ್ರಶ್ನಿಸಿದ್ದಾರೆ.
ಪೋಷಕರು ಶಾಲೆಗೆ ಬಂದು ಶಿಕ್ಷಕನ ವಿರುದ್ಧ ಆಕ್ರೋಶ ಹೊರಹಾಕಿ, 15ದಿನಗಳ ಹಿಂದೆಯಷ್ಟೇ ಕೂದಲು ಕಟ್ ಮಾಡಿದ್ದು, ಹೆಚ್ಚೇನು ಕೂದಲು ಬಂದಿರಲಿಲ್ಲ. ಶಿಕ್ಷಕರಿಗೆ ಕೂದಲು ಕಟ್ ಮಾಡುವ ಅವಶ್ಯಕತೆಯಿತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.
ಸ್ಥಳಕ್ಕೆ ಶ್ರೀರಾಮ ಸೇನೆ ಕಾರ್ಯಕರ್ತರು ಆಗಮಿಸಿದ್ದರು. ಈ ವೇಳೆ ಸ್ಕೂಲ್ ಆವರಣದಲ್ಲಿ ಕೆಲಕಾಲ ಹೈಡ್ರಾಮಾ ನಡೆಯಿತು. ನಂತರ ಸ್ಥಳಕ್ಕೆ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್ ಬುರಡಿ ಆಗಮಿಸಿದರು.