ಬೆಂಗಳೂರು: ಜೆಪಿ ನಗರದಲ್ಲಿ ಬೈಕ್ ಸವಾರನೊಬ್ಬ ತಮ್ಮ ಕಾರಿಗೆ ಗುದ್ದಿದ್ದನೆಂದು ಸಿಟ್ಟಿಗೆದ್ದ ಕೇರಳ ಮೂಲದ ದಂಪತಿ ಆತನಿಗೆ ಢಿಕ್ಕಿ ಹೊಡೆದು ಕೊಂದೇ ಬಿಟ್ಟ ಹೇಯ ಕೃತ್ಯ ನಡೆದಿದೆ. ಈ ಘಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೇರಳ ಮೂಲದ ಕಳರಿಪಯಟ್ಟು ಟ್ರೈನರ್ ಮನೋಜ್ ಕುಮಾರ್ ಮತ್ತು ಆತನ ಪತ್ನಿ ಆರತಿ ಆರೋಪಿಗಳು. ಬೆಂಗಳೂರಿನ ಜೆಪಿ ನಗರ ಬಳಿ ಇವರ ಕಾರಿಗೆ ಎದುರಿನಿಂದ ಬರುತ್ತಿದ್ದ ಬೈಕ್ ಗುದ್ದಿತ್ತು. ಪರಿಣಾಮ ಅವರ ಕಾರಿನ ಮಿರರ್ ಗೆ ಕೊಂಚ ಹಾನಿಯಾಗಿತ್ತು. ತಕ್ಷಣವೇ ಬೈಕ್ ಸವಾರ ದರ್ಶನ್ ಸಾರಿ ಕೇಳಿ ಮುಂದೆ ಸಾಗಿದ್ದ.
ಆದರೆ ಆತ ಬೈಕ್ ನಿಲ್ಲಿಸಿ ವಿಚಾರಿಸಿಲ್ಲವೆಂದು ಸಿಟ್ಟಿಗೆದ್ದ ದಂಪತಿ ಕಾರು ಯು ಟರ್ನ್ ತೆಗೆದುಕೊಂಡು ಹಿಂದಿನಿಂದ ಬಂದು ಬೈಕ್ ಸವಾರನಿಗೆ ಗುದ್ದಿದ್ದಾರೆ. ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದರ್ಶನ್ ಒಂದಷ್ಟು ದೂರ ಹೋಗಿ ಬಿದ್ದು ತಲೆಗೆ ತೀವ್ರ ಪೆಟ್ಟಾಗಿದೆ. ಪರಿಣಾಮ ಆತ ಸಾವನ್ನಪ್ಪಿದ್ದಾನೆ. 24 ವರ್ಷದ ಡೆಲಿವರಿ ಬಾಯ್ ಕೆಲಸ ಮಾಡಿಕೊಂಡಿದ್ದ ಯುವಕನ ಪ್ರಾಣ ಕ್ಷಣಿಕ ಕೋಪಕ್ಕೆ ಬಲಿಯಾಗಿದೆ.
ವಿಪರ್ಯಾಸವೆಂದರೆ ಘಟನೆ ನಡೆದ ಬಳಿಕ ಮುಂದೆ ಸಾಗಿದ್ದ ದಂಪತಿ ಕೆಲವು ಹೊತ್ತಿನ ನಂತರ ಮಾಸ್ಕ್ ಹಾಕಿಕೊಂಡು ಸ್ಥಳಕ್ಕೆ ಬಂದು ತಮ್ಮ ಕಾರಿನ ಚೂರುಗಳನ್ನು ಸಂಗ್ರಹಿಸಿ ತೆರಳಿದ್ದಾರೆ. ಇವೆಲ್ಲವೂ ಸಿಸಿಟಿವಿಯಲ್ಲಿ ದಾಖಲಾಗಿದ್ದು ಇದನ್ನು ಆಧರಿಸಿ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.