ಸಂಸತ್ ನಲ್ಲೂ ವಾಲ್ಮೀಕಿ ಹಗರಣದ ಸದ್ದು: ಕೇಂದ್ರಕ್ಕೆ ಮೊರೆಯಿಟ್ಟ ವಿಶ್ವೇಶರ ಹೆಗಡೆ ಕಾಗೇರಿ

Krishnaveni K

ಸೋಮವಾರ, 22 ಜುಲೈ 2024 (16:02 IST)
ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣವನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ನಿರ್ದೇಶನ ನೀಡಬೇಕೆಂದು ಎಂದು ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮನವಿ ಮಾಡಿದರು.

ದೆಹಲಿಯ ಲೋಕಸಭೆಯಲ್ಲಿ ಇಂದು ಶೂನ್ಯಕಾಲದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ನಿಗಮದ ಹಣ ತೆರಿಗೆಯಿಂದ ಸಂಗ್ರಹವಾಗಿದೆ. ಪರಿಶಿಷ್ಟ ಸಮುದಾಯದವರಿಗಾಗಿ ಈ ಹಣ ಬಳಕೆ ಆಗಬೇಕಿತ್ತು. ಅವರಿಗೆ ಬಳಕೆ ಆಗದೆ ಬೇನಾಮಿ ಖಾತೆಗಳಿಗೆ ವರ್ಗಾವಣೆ ಮೂಲಕ ಇಷ್ಟು ದೊಡ್ಡ ಪ್ರಮಾಣದ ಹಣ ದುರುಪಯೋಗ ಆಗಿದ್ದು, ಪರಿಶಿಷ್ಟ ಸಮಾಜದ ಬಂಧುಗಳ ಕಲ್ಯಾಣ ಚಟುವಟಿಕೆಗೆ ತೊಂದರೆ ಆಗಿದೆ ಎಂದು ವಿವರಿಸಿದರು.

ಮುಖ್ಯಮಂತ್ರಿಗಳೇ ಸ್ವತಃ ಹಣಕಾಸಿನ ಇಲಾಖೆಯನ್ನೂ ನೋಡಿಕೊಳ್ಳುತ್ತಿದ್ದಾರೆ. ಹಾಗಾಗಿ ಆಡಳಿತ ವ್ಯವಸ್ಥೆಯ ದುರುಪಯೋಗ ಆಗಿದೆ. ಟ್ರೆಜರಿ ಮೂಲಕ ಇದರ ವರ್ಗಾವಣೆ ಆಗಿದ್ದಾಗಿ ಸರಕಾರವೂ ಒಪ್ಪಿಕೊಂಡಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯದ ಪರಿಶಿಷ್ಟರ ಕಲ್ಯಣಾ ಇಲಾಖೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮವಿದ್ದು, ಅದರಲ್ಲಿ 187 ಕೋಟಿ ರೂಪಾಯಿ ಅವ್ಯವಹಾರ ಆದ ಆರೋಪವಿದೆ. ಖಜಾನೆಯಿಂದ 187 ಕೋಟಿ ರೂಪಾಯಿ ಬೇನಾಮಿ ಖಾತೆಗಳಿಗೆ ಜಮಾ ಆದ ಮಾಹಿತಿ ಲಭಿಸಿದೆ ಎಂದು ವಿವರಿಸಿದರು.

ಕರ್ನಾಟಕದಲ್ಲಿರುವ ರಾಜ್ಯ ಸರಕಾರದಲ್ಲಿ ಆಡಳಿತಾತ್ಮಕವಾದ ಅನೇಕ ಸಮಸ್ಯೆಗಳು ನಿರ್ಮಾಣವಾಗಿದೆ. ಅದರಲ್ಲೂ ವಿಶೇಷವಾಗಿ ಅಭಿವೃದ್ಧಿಗೆ ನಿರ್ಲಕ್ಷ್ಯದ ಜೊತೆಯಲ್ಲಿ ಬೇರೆಬೇರೆ ಅನೇಕ ವಿಷಯಗಳಿದ್ದು, ಅವನ್ನು ಇಲ್ಲಿ ಪ್ರಸ್ತಾಪಿಸಲು ಬಯಸುತ್ತಿಲ್ಲ ಎಂದು ನುಡಿದರು. 

ಕರ್ನಾಟಕವು ಹಲವಾರು ಕ್ಷೇತ್ರಗಳಲ್ಲಿ ಬಹಳ ಒಳ್ಳೆಯ ಸಾಧನೆ ಮಾಡಿದ ರಾಜ್ಯ ಎಂದು ಗಮನ ಸೆಳೆದರು. ಐ.ಟಿ, ಬಿ.ಟಿ. ವಿಷಯಗಳಲ್ಲಂತೂ ಜಗತ್ತಿನಲ್ಲಿ ಕರ್ನಾಟಕ, ಬೆಂಗಳೂರು ಬಹಳ ಒಳ್ಳೆಯ ಸಾಧನೆ ಮಾಡಿದೆ ಎಂದು ವಿವರಿಸಿದರು.
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ