ನೀರಿಗಾಗಿ ನಡಿಗೆ, ಹಿಂದೆ ಸರಿವ ಪ್ರಶ್ನೆಯೇ ಇಲ್ಲ; ಡಿ.ಕೆ. ಶಿವಕುಮಾರ್

ಬುಧವಾರ, 5 ಜನವರಿ 2022 (20:26 IST)
ಬೆಂಗಳೂರು : ಇದು ಕೋವಿಡ್ ಲಾಕ್ ಡೌನ್ ಅಲ್ಲ, ಬಿಜೆಪಿ ಕರ್ಫ್ಯೂ, ಬಿಜೆಪಿ ಲಾಕ್ ಡೌನ್. ಇಲ್ಲಿ ಯಾವುದೇ ಟಫ್ ರೂಲ್ ಇಲ್ಲ. ಬಿಜೆಪಿಯವರು ರಾಜಕಾರಣ ಮಾಡಲು ಟಫ್ ಆಗಿದೆ, ಅವರ ರಾಜಕಾರಣ ಟಫ್ ಆಗಿದೆ, ಜನ ಅವರಿಗೆ ಟಫ್ ಆಗಿ ಉತ್ತರ ನೀಡುತ್ತಿದ್ದಾರೆ. ಅದಕ್ಕಾಗಿ ಈ ನಿರ್ಬಂಧ ಹೇರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಒಂದೇ ದಿನ ಮೂರು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಸರಕಾರ ಹೇಳುತ್ತಿದೆ. ರಾಜ್ಯದಲ್ಲಿ 6 ಕೋಟಿ ಜನ ಇದ್ದಾರೆ. ಸೋಂಕಿತರ ಸಂಖ್ಯೆ 2 ರಿಂದ 3 ಸಾವಿರಕ್ಕೆ ಏರಿದೆ ಎಂದು ಹೇಳುತ್ತಿದ್ದಾರೆ. ಆ ಸೋಂಕಿತರು ಎಲ್ಲಿದ್ದಾರೆ ಎಂದು ಪಟ್ಟಿ ಕೊಟ್ಟರೆ ನಾವು ಹೋಗಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ. ಅವರು ರ‍್ಯಾಲಿ, ಪ್ರತಿಭಟನೆ ಮಾಡಬೇಡಿ ಎಂದಿದ್ದಾರೆ. ನಮ್ಮದು ನೀರಿಗಾಗಿ ನಡಿಗೆ‌. ವಾಕ್ ಫಾರ್ ದಿ ವಾಟರ್. ನಾವು ನೀರಿಗಾಗಿ ನಡೆಯುತ್ತೇವೆ ಅಷ್ಟೇ.
ಜನರ ಹಿತಕ್ಕಾಗಿ, ಕುಡಿಯುವ ನೀರಿಗೆ, ಜನರ ಭಾವನೆ, ಧ್ವನಿಗಾಗಿ, ರೈತರ ರಕ್ಷಣೆಗಾಗಿ ಬೆಂಗಳೂರಿನ ನಾಗರಿಕರಿಗಾಗಿ ನಾವು ಮನವಿ ಮಾಡುತ್ತಿದ್ದೇವೆ. ನಮ್ಮದು ಹೋರಾಟವಲ್ಲ ಮನವಿ. ಸರ್ಕಾರ ನಿರ್ಬಂಧ ಎಂದು ನೋಟೀಸ್ ಜಾರಿ ಮಾಡಿದ್ದಾರೆ. ನಾವು ರ‍್ಯಾಲಿ, ಧರಣಿ ಮಾಡುವುದಿಲ್ಲ. ನೀರಿಗಾಗಿ ನಡೆಯುತ್ತೇವೆ. ರಸ್ತೆಯಲ್ಲಿ ಯಾರೂ ನಡೆಯಬಾರದಾ? ಇಡೀ ರಾಜ್ಯದಲ್ಲಿ ರಸ್ತೆಯಲ್ಲಿ ಯಾರೂ ಓಡಾಡಬಾರದಾ? ಅದನ್ನು ತಡೆಯಲು ಹೇಗೆ ಸಾಧ್ಯ..?
ನನಗೆ ಒಂದು ವಿಚಾರದಲ್ಲಿ ಬಹಳ ಸಂಕಟವಾಗುತ್ತಿದೆ. ಈಗಾಗಲೇ ಜನ ಸಂಕಷ್ಟಕ್ಕೆ ಸಿಕ್ಕಿದ್ದಾರೆ. ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು, ಕಾರ್ಮಿಕರು ಒದ್ದಾಡುತ್ತಿದ್ದಾರೆ. ಅವರ ಮೇಲೆ ಅನಗತ್ಯವಾಗಿ ಮತ್ತೆ ಲಾಕ್ ಡೌನ್ ಹೇರುವುದು ಎಷ್ಟರ ಮಟ್ಟಿಗೆ ಸರಿ? ಮಾರ್ಗಚೂಚಿ ಉಲ್ಲಂಘನೆ ಮಾಡಿದ ಬಿಜೆಪಿ ನಾಯಕರ ವಿರುದ್ಧ ಮೊದಲು  ಪ್ರಕರಣ ದಾಖಲಿಸಿಕೊಳ್ಳಲಿ ಎಂದು ಡಿಕೆಶಿ ಹೇಳಿದರು.
ಪಾದಯಾತ್ರೆ ಹೆಸರು ಬದಲಾಗುತ್ತದೇಯೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದನ್ನು ಯಾತ್ರೆ ಎಂದು ಯಾಕೆ ಕರೆಯುತ್ತೀದ್ದೀರಿ ? ಇದು ನೀರಿಗೋಸ್ಕರ ನಡಿಗೆ’ ಎಂದರು.
ಹಾಗಾದ್ರೆ ಹೆಸರು ಬದಲಿಸುತ್ತೀರಾ, ವಾಹನದ ಮೇಲೆ ಪಾದಯಾತ್ರೆ ಹೆಸರಿದೆಯಲ್ಲಾ ಎಂಬ ಪ್ರಶ್ನೆಗೆ, ‘ಹೆಸರು ಬದಲಿಸಿಕೊಳ್ಳೋಣ ಬಿಡಿ. ನೀರಿಗಾಗಿ ನಡಿಗೆ, Walk for Water’ ಎಂದು ಉತ್ತರಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ