ಧಾರವಾಡ: ರಾಜ್ಯದಾದ್ಯಂತ ಸದ್ದು ಮಾಡುತ್ತಿರುವ ವಕ್ಫ್ ಬೋರ್ಡ್ ನೋಟಿಸ್ ಬಿಸಿ ಕೇವಲ ಹಿಂದೂ ಕುಟುಂಬಗಳಿಗೆ ಮಾತ್ರವಲ್ಲ, ಮುಸ್ಲಿಮ್ ಕುಟುಂಬಗಳಿಗೂ ತಟ್ಟಿದೆ. ಧಾರವಾಡ, ವಿಜಯಪುರದಲ್ಲಿ ಅನೇಕ ಮುಸ್ಲಿಂ ಕುಟುಂಬಗಳಿಗೂ ವಕ್ಫ್ ನೋಟಿಸ್ ನೀಡಿದೆ.
ವಿಜಯಪುರದಲ್ಲಿ ವಕ್ಫ್ ಬೋರ್ಡ್ ನೋಟಿಸ್ ವಿವಾದ ಮೊದಲು ಸುದ್ದಿಯಾಗಿತ್ತು. ಇಲ್ಲಿ ನೂರಾರು ಎಕರೆ ರೈತರ ಜಮೀನಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿದ ಆರೋಪ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆಗಳೂ ನಡೆದವು. ಬಳಿಕ ಸಿಎಂ ಸಿದ್ದರಾಮಯ್ಯ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಲ್ಲ ಎಂದರು.
ಇದಾದ ಬಳಿಕ ಕಲಬುರಗಿಯಲ್ಲೂ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ಪತ್ತೆಯಾಗಿತ್ತು. ಉತ್ತರ ಕರ್ನಾಟಕದ ಆರು ಜಿಲ್ಲೆಗಳ 400 ಮುಸ್ಲಿಮ್ ಕುಟುಂಬಗಳಿಗೂ ವಕ್ಫ್ ನೋಟಿಸ್ ಬಂದಿರುವುದು ತಿಳಿದುಬಂದಿದೆ. ಕಳೆದ 10 ವರ್ಷಗಳಿಂದ ಈ ಕುಟುಂಬಗಳು ತಮ್ಮ ಆಸ್ತಿ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರಂತೆ.
ವಿಜಯಪುರದಲ್ಲಿ ಅತೀ ಹೆಚ್ಚು ಮುಸ್ಲಿಮರಿಗೆ ನೋಟಿಸ್ ಜಾರಿಯಾಗಿದೆ ಎನ್ನಲಾಗಿದೆ. ಧಾರವಾಡದಲ್ಲಿ 20 ಕ್ಕೂ ಹೆಚ್ಚು ಮುಸ್ಲಿಮ್ ಕುಟುಂಬದವರ ಆಸ್ತಿ ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿರುವುದು ತಿಳಿದುಬಂದಿದೆ. ಇದೀಗ ಧಾರವಾಡ ರೈತರು ವಕ್ಫ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ವಿಜಯಪುರದಲ್ಲಿ ಈಗಾಗಲೇ ವಿವಾದ ದೊಡ್ಡ ಮಟ್ಟದಲ್ಲಿದ್ದು ಪ್ರತಿಭಟನೆಗಳು ನಡೆದಿವೆ.