ರಾಮನಗರ ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ್ದು ನಾನು. ನೀವು ಯಾಕೆ ಕಿತ್ತಾಡುತ್ತಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರಾಮನಗರದ ವೇದಿಕೆಯಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಮತ್ತು ಬಿಜೆಪಿ ಸಚಿವ ಅಶ್ವತ್ಥ ನಾರಾಯಣ ರಾಮನಗರ ಅಭಿವೃದ್ಧಿ ವಿಷಯದಲ್ಲಿ ವಾಗ್ದಾದ ನಡೆಸಿದ ಘಟನೆಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ರಾಮನಗರ ಅಭಿವೃದ್ಧಿ ಮಾಡಿದೆ.
ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜೀವ್ ಗಾಂಧಿ ಹೆಲ್ತ್ ಯೂನಿವರ್ಸಿಟಿ ಅನುಮೋದನೆ ಮಾಡಿದ್ದೆ. ರಾಮನಗರ ಜಿಲ್ಲೆಗೆ ನರ್ಸಿಂಗ್ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದೆ. ಇದಕ್ಕಾಗಿ 360 ಕೋಟಿ ರೂ. ಅನುದಾನವನ್ನೂ ಬಿಡುಗಡೆ ಮಾಡಿದ್ದೆ. ನಮ್ಮ ಸರ್ಕಾರ ಇಳಿಯುತ್ತಿದ್ದಂತೆಯೇ ಎಲ್ಲವನ್ನೂ ನಿಲ್ಲಿಸಿಬಿಟ್ಟರು ಎಂದು ಕುಮಾರಸ್ವಾಮಿ ಆರೋಪಿಸಿದರು.
ನಾನು ಇಳಿದ ನಂತರ 8 ವರ್ಷ ಬಿಜೆಪಿ ಸರ್ಕಾರ ಅಧಿಕಾರ ಮಾಡಿದೆ. 5 ವರ್ಷ ಕಾಂಗ್ರೆಸ್ ಸರ್ಕಾರ ಇತ್ತು. ಅವರಿಬ್ಬರೂ ರಾಮನಗರಕ್ಕೆ ಏನು ಮಾಡಿದರು ಎಂದು ಹೇಳಲಿ. ನಾನು ಅನುಮೋದನೆ ಮಾಡಿದ್ದ ಆಸ್ಪತ್ರೆ ಕಟ್ಟಿಸಿದ್ದರೆ ಕೋವಿಡ್ ಸಂದರ್ಭದಲ್ಲಿ ಎಷ್ಟು ಪ್ರಾಣ ಉಳಿಸಬಹುದಿತ್ತು ಎಂದು ಅವರು ವಿಷಾದಿಸಿದರು.