ಬೆಂಗಳೂರು: ಬಿಸಿಲ ಬೇಗೆಗೆ ತತ್ತರಿಸಿರುವ ಜನಕ್ಕೆ ಈಗ ಒಮ್ಮೆ ಮಳೆ ಬಂದರೆ ಸಾಕು ಎನ್ನುವ ಪರಿಸ್ಥಿತಿಯಾಗಿದೆ. ಹವಾಮಾನ ಇಲಾಖೆ ವರದಿ ಪ್ರಕಾರ ಇಂದು ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ‍್ಯತೆಯಿದೆ.
ಇಂದು ಒಟ್ಟು 7 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ‍್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೈಸೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ ಬೆಳಗಾವಿ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ‍್ಯತೆಯಿದೆ ಎಂದು ವರದಿಯಾಗಿದೆ.
ಆದರೆ ಕುಡಿಯುವ ನೀರಿಗೂ ಪರದಾಡುತ್ತಿರುವ ಬೆಂಗಳೂರಿಗೆ ಇನ್ನೂ ಮಳೆಯ ಸೂಚನೆಯಿಲ್ಲ. ಬೆಂಗಳೂರು ಜೊತೆಗೆ ಉತ್ತರ ಕನ್ನಡ, ಬೀದರ್, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ ಮೊದಲಾದೆಡೆ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಕನ್ನಡದ ಗಡಿಭಾಗಳಲ್ಲಿ ಎರಡು ದಿನದ ಹಿಂದೆ ಮಳೆಯಾಗಿತ್ತು. ಇದೀಗ ಮಂಗಳೂರಿನ ಪಣಂಬೂರು ಭಾಗದಲ್ಲಿ ಮಳೆಯಾದ ಬಗ್ಗೆ ವರದಿಯಾಗಿದೆ. ಆದರೆ ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ರಾಜ್ಯ ರಾಜಧಾನಿಯಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ.