ವಿಸ್ಮಯವೆನಿಸುವ ಘಟನೆ! ಮೃತ ದೇಹದಲ್ಲಿ ಜೀವಂತ ಮಗು! ಮುಂದೇನಾಯ್ತು?

ಗುರುವಾರ, 11 ನವೆಂಬರ್ 2021 (15:21 IST)
ಗದಗ : ದಂಡಪ್ಪ ಮಾನ್ವಿ ಮಹಿಳಾ ಆ್ಯಂಡ್ ಮಕ್ಕಳ ಆಸ್ಪತ್ರೆ ವೈದ್ಯರು ಮೃತ ಗರ್ಭಿಣಿ ಹೊಟ್ಟೆಯಿಂದ ಜೀವಂತ ಮಗುವನ್ನು ಹೊರತೆಗೆದಿದ್ದಾರೆ.
ಗರ್ಭಿಣಿ ಅನ್ನಪೂರ್ಣ ಎಂಬುವವರು ಲೋ ಬಿಪಿ, ಮೂರ್ಛೆ ರೋಗದಿಂದ ಬಳಲುತ್ತಿದ್ದರು. ಊರಿನಿಂದ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಗರ್ಭಿಣಿ ಮೃತಪಟ್ಟಿದ್ದಾರೆ. ಆದರೆ ಹೊಟ್ಟೆಯಲ್ಲಿದ್ದ ಮಗು ಜೀವಂತವಿರುವುದು ವೈದ್ಯರಿಗೆ ತಿಳಿದ ತಕ್ಷಣ ಆಪರೇಷನ್ ಮಾಡಿದ್ದಾರೆ. ಆಪರೇಷನ್ ನಡೆಸಿದ ವೈದ್ಯರ ತಂಡ ಹೆಣ್ಣು ಮಗುವನ್ನು ಹೊರತೆಗೆದಿದ್ದಾರೆ. ನವೆಂಬರ್ 4ರಂದು ನಡೆದ ಅಪರೂಪದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಮುಶಿಗೇರಿಯ ಅನ್ನಪೂರ್ಣ ಅಬ್ಬಿಗೇರಿ ಎಂಬ ತುಂಬು ಗರ್ಭಿಣಿಗೆ ಇದೇ ನವೆಂಬರ್ 4ರಂದು ಹೆರಿಗೆ ಆರೋಗ್ಯದಲ್ಲಿ ಏರುಪೇರಾಗಿತ್ತು. ತುಂಬು ಗರ್ಭಿಣಿಯಾಗಿದ್ದರೂ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿರಲಿಲ್ಲ. ಮೂರ್ಛೆ ರೋಗ ಕಾಣಿಸಿಕೊಂಡು ತೀವ್ರ ಅಸ್ವಸ್ಥಳಾಗಿದ್ದರಂತೆ. ಆಸ್ಪತ್ರೆಗೆ ಬರುತ್ತಿದ್ದಂತೆ ಗರ್ಭಿಣಿ ಮೃತಪಟ್ಟಿದ್ದಾರೆ. ಡಿಎಂಎಂ ಹೆರಿಗೆ ಆಸ್ಪತ್ರೆಯ ವೈದ್ಯರು ಸ್ಕ್ಯಾನಿಂಗ್ ಮಾಡಿ ನೋಡಿದಾಗ ಮಗುವಿನ ಹಾರ್ಟ್ ಬೀಟ್ ಇನ್ನೂ ಬಡಿದುಕೊಳ್ಳುತ್ತಿತ್ತು. 10 ನಿಮಿಷದೊಳಗೆ ಕುಟುಂಬಸ್ಥರೊಂದಿಗೆ ವೈದ್ಯರು ಚರ್ಚೆ ಮಾಡಿ ಆಪರೇಷನ್ ಮಾಡಲು ಮುಂದಾಗಿದ್ದಾರೆ.
ಹೆಣ್ಣು ಮಗು ಜನನವಾಗಿದ್ದು, ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಸವಾಲಾಗಿ ಮಗುವನ್ನ ಬದುಕಿಸಿರುವ ವೈದ್ಯರು ಈ ಮಗುವಿನ ಆರೈಕೆಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಮಗುವಿನ ಆರೋಗ್ಯ ದಿನದಿಂದ ದಿನಕ್ಕೆ ಚೇತರಿಕೆ ಕಾಣುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಗುವಿನ ತಂದೆ, ಮದುವೆಯಾಗಿ ಒಂದು ವರ್ಷ ಆಗಿತ್ತು. ಈಗ ನನ್ನ ಒಂಟಿ ಮಾಡಿ ನನ್ನ ಹೆಂಡತಿ ಹೋಗಿದ್ದಾಳೆ. ಮಗುವನ್ನ ನಾನು ಚೆನ್ನಾಗಿ ಸಾಕಿ ನನ್ನ ಹೆಂಡತಿ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡುತ್ತೀನಿ ಅಂತ ಕಣ್ಣೀರು ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ