9 ತಿಂಗಳ ಗರ್ಭಿಣಿಗೆ ಖಾಸಗಿ ವೈದ್ಯರು ಮಾಡಿದ ಗತಿ ಏನು?

ಮಂಗಳವಾರ, 3 ಸೆಪ್ಟಂಬರ್ 2019 (17:57 IST)
ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ 9 ತಿಂಗಳ ಗರ್ಭಿಣಿಗೆ ಆಗಬಾರದ ಘಟನೆ ಆಗಿದೆ.

ಗರ್ಭಿಣಿ ಮತ್ತು ಆಕೆಯ ಹೊಟ್ಟೆಯಲ್ಲಿದ್ದ ಮಗು ಮೃತಪಟ್ಟಿರುವ ಘಟನೆ ಕೋಲಾರದಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯ ಖಂಡಿಸಿ ಮೃತರ ಪೋಷಕರು, ಸಂಬಂಧಿಕರು ಆಸ್ಪತ್ರೆಯ ವಿರುದ್ಧ ಪ್ರತಿಭಟನೆ ನಡೆಸಿದ್ರು. ಮಹಿಳೆಯ ಸಾವಿಗೆ ಕಾರಣರಾದ ವೈದ್ಯರನ್ನ ಬಂಧಿಸಬೇಕೆಂದು ಒತ್ತಾಯಿಸಿದ್ರು.

ಕೋಲಾರ ತಾಲೂಕಿನ ಮುದುವತ್ತಿ ಗ್ರಾಮದ ನಿವಾಸಿ ಸುಧಾ(22) ಮೃತ ಗರ್ಭಿಣಿ. ಸುಧಾ ಕಳೆದ ಎರಡು ದಿನಗಳ ಹಿಂದೆ ಕೋಲಾರ ನಗರದ ಗಣೇಶ್ ಹೆಲ್ತ್ ಕೇರ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಲ್ಲಿನ ವೈದ್ಯೆ ಡಾ.ಲತಾ ಅವರೇ ಸುಧಾ ಅವರ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ಕೊಡುತ್ತಿದ್ದರು. ಆದರೆ ರಾತ್ರಿ ಸುಧಾಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣ ವೈದ್ಯ ಲತಾ ಅವರು ಚಿಕಿತ್ಸೆ ನೀಡಿ ಸ್ಕ್ಯಾನಿಂಗ್ ಮಾಡಿಸುವಂತೆ ಹೇಳಿದ್ರು. ಮಗು ಉಳಿಯುವುದು ಕಷ್ಟ ಅಂತಾ ವೈದ್ಯರು ಹೇಳಿದ್ರು. ತಾಯಿಯನ್ನಾದರೂ ಉಳಿಸುವಂತೆ ಹೇಳಿದಾಗ ತಾಯಿಗೆ ಏನೂ ಸಮಸ್ಯೆಯಿಲ್ಲ ಅಂತಾ ಭರವಸೆ ನೀಡಿದ್ದರು. ಆದರೆ ಸರಿಯಾಗಿ ಚಿಕಿತ್ಸೆ ನೀಡದೆ ನಿರ್ಲಕ್ಷ್ಯದಿಂದ ಸುಧಾ ಹಾಗೂ ಅವರ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ ಅಂತಾ ಮಹಿಳೆಯ ಕುಟುಂಬದವ್ರು ಆರೋಪಿಸಿದರು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ವಿಜಯಕುಮಾರ್ ಅವ್ರು ಘಟನೆಯ ಬಗ್ಗೆ ಮೃತರ ಪೋಷಕರು ಹಾಗೂ ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿ ಅವರೊಂದಿಗೆ ಚರ್ಚಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ ವೈದ್ಯರ ಕಡೆಯಿಂದ ತಪ್ಪಾಗಿದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.

ನ್ಯಾಯ ಸಿಗುವವರೆಗೂ ಗರ್ಭಿಣಿ ಹಾಗೂ ಶಿಶುವಿನ ಮೃತದೇಹವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಲ್ಲ ಎಂದು ಪೋಷಕರು ಹಾಗೂ ಸಂಬಂಧಿಕರು ಪಟ್ಟು ಹಿಡಿದಿದ್ದರು. ಪೊಲೀಸರು ಮತ್ತು ಆರೋಗ್ಯಾಧಿಕಾರಿ ಅವರ ಮೃತಳ ಪೋಷಕರ ಮನವೊಲಿಸಿದ್ದರಿಂದ ಪ್ರತಿಭಟನೆಯನ್ನು ಕೈ ಬಿಟ್ಟರು. ಈ ಸಂಬಂಧ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ