ಪ್ರವಾಸಿ ಉತ್ಸವದ ಸಂಭ್ರಮ ಎಲ್ಲಿದೆ ಗೊತ್ತಾ? ಪ್ರವಾಸಿ ಉತ್ಸವದ ಸಂಭ್ರಮ ಎಲ್ಲಿದೆ ಗೊತ್ತಾ?
ಶುಕ್ರವಾರ, 11 ಜನವರಿ 2019 (15:10 IST)
ಪ್ರಕೃತಿ ವಿಕೋಪದಿಂದ ಪ್ರವಾಸೋದ್ಯಮ ಕುಸಿದು ಬಿದ್ದಿರುವ ಜಿಲ್ಲೆಯಲ್ಲಿ ಮತ್ತೆ ಪ್ರವಾಸಿಗರನ್ನು ಆಕರ್ಷಿಸಲು ಜಿಲ್ಲಾಡಳಿತ ಸಜ್ಜಾಗಿದೆ.
ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಹಾಗೂ ಪಶುಸಂಗೋಪನಾ ಇಲಾಖೆ ಆಶ್ರಯದಲ್ಲಿ ಜ.11ರಿಂದ 13ರವರೆಗೆ ಮೂರು ದಿನಗಳ ಕಾಲ ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರವಾಸಿ ಉತ್ಸವ ನಡೆಯಲಿದೆ. ಆಗಸ್ಟ್ ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಕಹಿ ನೆನಪಿನಿಂದ ಜಿಲ್ಲೆಯ ಜನತೆಯನ್ನು ಹೊರತರಲು ಹಾಗೂ ಕುಸಿದು ಬಿದ್ದಿರುವ ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸಲು ಕೊಡಗು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರವಾಸಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ‘ಕೊಡಗು ಪ್ರವಾಸಿ ಉತ್ಸವಕ್ಕೆ’ ಚಾಲನೆ ನೀಡಲಿದ್ದಾರೆ. ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಅವರು ಉದ್ಘಾಟಿಸಲಿದ್ದಾರೆ. ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರವಾಸಿಗರ ಹಾಟ್ ಸ್ಪಾಟ್ ರಾಜಾಸೀಟ್ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಕಿರುತೆರೆಯ ನಟ-ನಟಿಯರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಮಾಡುವ ಮೂಲಕ ಆಕರ್ಷಿಸಲಿದ್ದಾರೆ.