ಹಂಪಿ ಉತ್ಸವ ನಡೆಸುವಂತೆ ಆಗ್ರಹ
ಮಂಗಳವಾರ, 8 ಜನವರಿ 2019 (19:04 IST)
ಹಂಪಿ ಉತ್ಸವ ನಡೆಸುವಂತೆ ಆಗ್ರಹಿಸಿ ಜ.13 ರಂದು ಹೊಸಪೇಟೆಯ ತಹಸಿಲ್ದಾರ್ ಕಚೇರಿಯಿಂದ ಹಂಪಿವರೆಗೆ ಕರ್ನಾಟಕ ಜನ ಕಲ್ಯಾಣ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಕಲಾವಿದರು, ಸಾಹಿತಿಗಳು ಪಾದಯಾತ್ರೆ ನಡೆಸಲಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಜನ ಕಲ್ಯಾಣ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಜೆ.ಎಂ.ಬಸವರಾಜ್ ಸ್ವಾಮಿ, ಪ್ರತಿ ವರ್ಷದಂತೆ ಈ ವರ್ಷ ನವೆಂಬರ್ 3 ರಿಂದ ಹಂಪಿ ಉತ್ಸವ ನಡೆಸಲು ಎಲ್ಲಾ ಸಿದ್ದತೆಯನ್ನು ಜಿಲ್ಲಾಡಳಿತ ನಡೆಸಿತ್ತು.
ಈ ಕುರಿತು ಅನೇಕ ಪೂರ್ವಭಾವಿ ಸಭೆಗಳನ್ನು ನಡೆಸಿತ್ತು. ಕಲಾವಿದರಿಂದ ಅರ್ಜಿಗಳನ್ನು ಪಡೆದಿತ್ತು. ಆದರೆ ಲೋಕಸಭೆಯ ಉಪ ಚುನಾವಣೆ ಘೋಷಣೆ ಮಾಡಿದ್ದರಿಂದ ನೀತಿ ಸಂಹಿತೆ ಹಿನ್ನಲೆಯಲ್ಲಿ ಮುಂದೂಡಲಾಯಿತು. ಆದರೆ ಚುನಾವಣೆ ಮುಗಿದ ಮೇಲೆ ಉತ್ಸವ ನಡೆಸಲು ಮುಂದಾಗದೆ, ಜಿಲ್ಲೆಯ ಜನರ, ಕಲಾವಿದರ ಅಭಿಪ್ರಾಯ ಪಡೆಯದೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವ ಕುಮಾರ್ ಅವರು ಉತ್ಸವವನ್ನು ಈ ವರ್ಷ ಬರಗಾಲದ ಹಿನ್ನಲೆಯಲ್ಲಿ ನಡೆಸದೇ ಇರುವ ಬಗ್ಗೆ ಪ್ರಕಟಿಸಿದರು. ಆಗ ಕಲಾವಿದರು, ಸಾಹಿತಿಗಳು, ವಿವಿಧ ಸಂಘಟನೆಗಳ ಮುಖಂಡರು, ಪ್ರತಿಪಕ್ಷಗಳ ನಾಯಕರು ಈ ಬಗ್ಗೆ ವಿರೋಧ ವ್ಯಕ್ತ ಪಡಿಸಿದ ಮೇಲೆ. ಹಂಪಿ ಉತ್ಸವ ರದ್ದು ಮಾಡಿಲ್ ಜನವರಿ ತಿಂಗಳ 12 ಮತ್ತು 13 ರಂದು ಸರಳವಾಗಿ ಆಚರಿಸುವ ಬಗ್ಗೆ ಸರಕಾರ ಸದನದಲ್ಲಿ ಪ್ರಕಟಿಸಿತ್ತು.
ಪ್ರಕಟಣೆ ಪ್ರಕಟಣೆಯಾಗಿದೆ ಹೊರೆತು ಯಾವುದೇ ಸಿದ್ದತೆ ಗಳು ನಡೆದಿಲ್ಲ. ಈ ಬಗ್ಗೆ ಜಿಲ್ಲಾಡಳಿತವೂ ಸ್ಪಷ್ಟ ಹೇಳಿಕೆ ನೀಡದೆ ಈ ಬಗ್ಗೆ ಸರಕಾರ ಯಾವುದೇ ನಿರ್ದೇಶನ ನೀಡಿಲ್ಲ ಎಂದಿದ್ದಾರೆ. ಅದಕ್ಕಾಗಿ ಉತ್ಸವ ನಡೆಸಬೇಕೆಂದು ಕಲಾವಿದರ ಸಹಕಾರದೊಂದಿಗೆ ಒತ್ತಾಯಿಸಲು ಈ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಹೇಳಿದರು.