ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಬಂಡಾಯ ತಾರಕಕ್ಕೇರಿದ್ದು, ಅಧ್ಯಕ್ಷ ಸ್ಥಾನಕ್ಕೆ ಭಾರೀ ಡಿಮ್ಯಾಂಡ್ ಬಂದಿದೆ. ಎಷ್ಟು ಜನ ರೇಸ್ ನಲ್ಲಿದ್ದಾರೆ ನೋಡಿ.
ಕರ್ನಾಟಕ ಬಿಜೆಪಿ ಈಗ ಒಡೆದ ಮನೆಯಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ರದ್ದು ಒಂದು ಗುಂಪಾದರೆ, ಬಿವೈ ವಿಜಯೇಂದ್ರರದ್ದು ಇನ್ನೊಂದು ಗುಂಪು. ಈ ನಡುವೆ ಕೆಲವರು ತಟಸ್ಥರಾಗಿ ಉಳಿದಿದ್ದಾರೆ.
ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕಿತ್ತೊಗೆಯಲೇ ಬೇಕು ಎಂದು ಪಣ ತೊಟ್ಟಿರುವ ಯತ್ನಾಳ್ ಬಣ ದಿನಕ್ಕೊಂದು ಅಸ್ತ್ರ ಬಿಡುತ್ತಿದೆ. ಲಿಂಗಾಯತ ಅಸ್ತ್ರ ವಿಫಲವಾದ ಬೆನ್ನಲ್ಲೇ ವಾಲ್ಮೀಕಿ ಸಮುದಾಯ ಅಸ್ತ್ರ ಬಿಟ್ಟಿದೆ. ವಾಲ್ಮೀಕಿ ಸಮುದಾಯದವರಿಗೆ ಅಧ್ಯಕ್ಷ ಪಟ್ಟ ಕೊಡಲಿ ಎಂದು ಪರೋಕ್ಷವಾಗಿ ಶ್ರೀರಾಮುಲುಗೆ ಅಧ್ಯಕ್ಷ ಸ್ಥಾನ ಕೊಡಲು ಲಾಬಿ ನಡೆಸುತ್ತಿದೆ.
ಇತ್ತ ಆರ್ ಅಶೋಕ್ ಆದರೂ ನಮಗೆ ಅಡ್ಡಿಯೇನಿಲ್ಲ ಎಂದು ಯತ್ನಾಳ್ ಬಣ ಹೇಳುತ್ತಿದೆ. ಜೊತೆಗೆ ಸ್ವತಃ ನಾನೇ ಅಧ್ಯಕ್ಷ ರೇಸ್ ನಲ್ಲಿದ್ದೇನೆ ಎಂದು ಯತ್ನಾಳ್ ಹೇಳಿದ್ದಾರೆ. ಈ ನಡುವೆ ವಿ. ಸೋಮಣ್ಣ ಹೆಸರೂ ಕೇಳಿಬರುತ್ತಿದೆ. ಸದ್ಯಕ್ಕೆ ಸಂಸದ, ಕೇಂದ್ರ ಸಚಿವರಾಗಿರುವ ಸೋಮಣ್ಣ ಅಧ್ಯಕ್ಷರಾದರೆ ಪ್ರಬಲ ಒಕ್ಕಲಿಗ ಸಮುದಾಯದ ಮತ ಪಡೆಯಬಹುದು ಎಂಬುದು ಬಿಜೆಪಿ ನಾಯಕರ ಪ್ಲ್ಯಾನ್ ಆಗಿದೆ. ಹೀಗಾಗಿ ಬಿಜೆಪಿಯಲ್ಲಿ ಈಗ ಒಂದು ಕುರ್ಚಿಗಾಗಿ ಸಾಕಷ್ಟು ಜನ ಫೈಟ್ ಮಾಡುತ್ತಿದ್ದಾರೆ. ಇಂದು ದೆಹಲಿಯಲ್ಲಿ ವಿಜಯೇಂದ್ರ ಜೊತೆ ಹೈಕಮಾಂಡ್ ಮಾತುಕತೆ ನಡೆಸಲಿದೆ. ಇದೇ ವಾರದಲ್ಲೇ ಬಿಜೆಪಿ ಅಧ್ಯಕ್ಷ ಸ್ಥಾನ ಯಾರಿಗೆ ಸಿಗಲಿದೆ ಎನ್ನುವುದು ಬಹುತೇಕ ಫೈನಲ್ ಆಗುವ ಸಾಧ್ಯತೆಯಿದೆ.