ಗಂಡಸರಿಗೆ ಮಾತ್ರ ಈ ಶಿಕ್ಷೆ ಯಾಕೆ: ಪ್ರಿಯತಮೆಯ ಕುಕೃತ್ಯವನ್ನು ಇಂಚಿಂಚು ಹೇಳಿ ಪ್ರಾಣಬಿಟ್ಟ ಯುವಕ

Sampriya

ಭಾನುವಾರ, 12 ಜನವರಿ 2025 (13:00 IST)
Photo Courtesy X
ಹಾಸನ: ಪ್ರಿಯತಮೆಯ ನಡತೆಯಿಂದ ಮನನೊಂದು ವಿಷ ಸೇವಿಸಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಯುವಕ ಚಿಕಿತ್ಸೆ ಫಲಿಸದೇ ಮಂಗಳೂರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ‌ಆತ್ಮಹತ್ಯೆಗೆ ಮುನ್ನ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಸಕಲೇಶಪುರ ತಾಲೂಕಿನ ಬಾಳೆಗದ್ದೆ ಗ್ರಾಮದ 30 ವರ್ಷದ ಕವನ್ ಮೃತ ಪ್ರಿಯಕರ. ಸಾಯುವ ಮುನ್ನ ಕವನ್ ಸಾವಿಗೆ ಕಾರಣ ತಿಳಿಸಿ ವೀಡಿಯೋ ಮಾಡಿಟ್ಟು ಒಂದು ವಾರದ ಹಿಂದೆ ವಿಷ ಸೇವಿಸಿದ್ದ. ನನ್ನ ಸಾವಿಗೆ ತಾನು ಪ್ರೀತಿಸಿದ ಹುಡುಗಿ ಹಾಗೂ ವಿನಯ್ ಎಂಬಾತ ಕಾರಣ ಎಂದು ವಿಡಿಯೋದಲ್ಲಿ ಎಳೆಎಳೆಯಾಗಿ ಯುವಕ ಕಾರಣ ಬಿಚ್ಚಿಟ್ಟಿದ್ದಾನೆ.  

ನನ್ನ ಸಾವಿಗೆ ನಾನು ಪ್ರೀತಿಸಿದ ಹುಡುಗಿ ಅಂಜಲಿಯೇ ಕಾರಣ. ಆಕೆ 2021ರಲ್ಲಿ ನನ್ನ ಮನೆ ಹಿಂದೆ ವಾಸವಿದ್ದಳು. ನನ್ನ ಜೀವನದಲ್ಲಿ ಅವಳು ಬಂದಳು. ಇಬ್ಬರೂ ಪ್ರೀತಿಸುತ್ತಿದ್ದೆವು. ನಮ್ಮ ನಡುವೆ ಎ ಟು ಜೆಡ್ ಎಲ್ಲಾ ಆಗಿದೆ. ನೀನು ನನಗೆ ಬೇಕೇಬೇಕು ಎಂದು ಹಠ ಹಿಡಿದಿದ್ದಳು. ಅನಂತರ ಅವಳ ನಡವಳಿಕೆ ಕಂಡು ದೂರವಾದೆ ಎಂದು ವಿಡಿಯೊದಲ್ಲಿ ಹೇಳಿದ್ದಾನೆ.

ಬಳಿಕ ನನ್ನ ಮೇಲೆ ಪೋಲಿಸ್ ಠಾಣೆಗೆ ಆಕೆ ದೂರು ನೀಡಿದ್ದಳು. ಹುಡುಗಿಯರು ಏನೇ ಮಾಡಿದರೂ ಪೊಲೀಸರಿಗೆ ಲೆಕ್ಕಕ್ಕೆ ಬರಲ್ಲ. ಗಂಡುಮಕ್ಕಳು ಮಾತ್ರ ಕೆಟ್ಟವರು. ಆ ಹೆಣ್ಣು ಏನು ಎಂದು ಇಡೀ ಸಕಲೇಶಪುರ ಪೊಲೀಸರಿಗೆ ಗೊತ್ತು. ಆಕೆ ಏನು ಅಂತ ಗೊತ್ತಿದ್ದರೂ ಪೊಲೀಸರು ಅವಳ ಬೆಂಬಲಕ್ಕೆ ನಿಂತರು. ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ ಎಂದಿದ್ದಾನೆ.

ಇವಳ ವಿಷಯದಿಂದ ನನ್ನನ್ನು ತಮ್ಮ, ಅಪ್ಪ, ಅಮ್ಮ ಎಲ್ಲಾ ಬಿಟ್ಟಿದ್ದಾರೆ. ಬಳಿಕ ಕೇಸ್ ವಾಪಸ್ ತೆಗೆದುಕೊಂಡಳು. ನನ್ನ ಪಾಡಿಗೆ ನಾನು ಇದ್ದೆ, ಮತ್ತೆ ಬಂದು ನನ್ನ ಲೈಫ್ ಹಾಳು ಮಾಡಿದಳು. ಒಂದು ದಿನ ನನ್ನ ಜೊತೆ ಇರು ಎಂದು ಮೈಸೂರು ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಹೋದಳು. ನನ್ನ ವೀಕ್ನೆಸ್ ಅವಳಿಗೆ ಗೊತ್ತಿತ್ತು. ನಾನು ಕುಡಿತೀನಿ, ಕುಡಿದ ಮೇಲೆ ಏಳಲ್ಲ ಎಂದು ಅವಳಿಗೆ ಗೊತ್ತು. ಮೊಬೈಲ್‌ಗೆ ಫಿಂಗರ್ ಪ್ರಿಂಟ್ ಇಟ್ಟಿದ್ದೆ. ಅದೇ ನಾನು ಮಾಡಿದ ತಪ್ಪು. ಪ್ಯಾಟರ್ನ್ ಪಾಸ್‌ವರ್ಡ್ ಇಟ್ಟಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ನನ್ನ ಲೈಫ್ ಹಾಳು ಮಾಡಿ 307 ಕೇಸ್ ಹಾಕಿದಳು.  

ಆಕೆಯನ್ನು ಚಾಮುಂಡಿಬೆಟ್ಟಕ್ಕೆ ಕರೆದುಕೊಂಡು ಬಂದು ಒಂದು ತಪ್ಪು ಮಾಡಿದೆ.  ನನ್ನ ಮೊಬೈಲ್‌ನಲ್ಲಿ ಪರ್ಸನಲ್ ಫೋಟೋ ತೆಗೆದುಕೊಂಡು ಇನ್ನೊಬ್ಬರ ಹೆಂಡತಿಗೆ ಕಳುಹಿಸಿದ್ದಾಳೆ. ಅದು ಎಲ್ಲೆಲ್ಲೋ ಹೋಗಿ ಏನೇನೋ ಆಯಿತು, ಗಲಾಟೆ ಆಯಿತು. ನಾನು ಸಾಯಲು ಇಷ್ಟೇ ಕಾರಣ ಎಂದಿದ್ದಾನೆ.

ನನ್ನ ಸಂಸಾರ ರೋಡಿಗೆ ಬಂತು. ನನ್ನ ಸಾವಿಗೆ ನನ್ನ ಮನೆಯವರು, ಅಣ್ಣ, ತಮ್ಮ, ಅಕ್ಕ, ತಂಗಿ, ಸ್ನೇಹಿತರು ಯಾರೂ ಕಾರಣ ಅಲ್ಲ. ವಿನಯ್ ಹೆಂಡತಿಯೂ ಅಲ್ಲ. ನನ್ನ ಸಾವಿಗೆ ಕಾರಣ ವಿನಯ್ ಹಾಗೂ ಆಕೆ. ಅವಳು ಫೋಟೋ ಕಳುಹಿಸಿ ಇಷ್ಟೆಲ್ಲಾ ಮಾಡಿದ್ದಾಳೆ ಎಂದು ಕವನ್ ತನ್ನ ನೋವನ್ನು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.‌

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ