‘ಫೀ ತುಂಬಿಲ್ಲ ಅಂತ ಮಕ್ಕಳನ್ನು ಶಾಲೆಯಿಂದ ಹೊರಹಾಕುವಂತಿಲ್ಲ’

ಶನಿವಾರ, 6 ಜುಲೈ 2019 (13:18 IST)
ಶುಲ್ಕ ಪಾವತಿಸಿಲ್ಲ ಎಂಬ ಕಾರಣದಿಂದ ಶಾಲೆಯಿಂದ ಯಾವುದೇ ಮಗುವನ್ನು ಹೊರಹಾಕುವಂತಿಲ್ಲ. ಹೀಗಂತ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ದ್ವಿಸದಸ್ಯ ಪೀಠ ನಿರ್ದೇಶನ ನೀಡಿದೆ.

ಡಾ.ಆರ್.ಜಿ.ಆನಂದ ಮತ್ತು ಪ್ರಜ್ಞಾ ಪ್ರಾಂಡೆ ನೇತೃತ್ವದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ದ್ವಿಸದಸ್ಯ ಪೀಠ ಈ ನಿರ್ದೇಶನ ನೀಡಿದೆ.

ಕಲಬುರಗಿಯಲ್ಲಿ ಕಲಬುರಗಿ ವಿಭಾಗ ಮಟ್ಟದ ಮಕ್ಕಳ ಹಕ್ಕುಗಳ ಉಲ್ಲಂಘನೆ ಕುರಿತಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ದ್ವಿಸದಸ್ಯ ಪೀಠವು ಸಾರ್ವಜನಿಕ ಅಹವಾಲು ಮತ್ತು ವಿಚಾರಣೆ ನಡೆಸಿತು.

ಬಳ್ಳಾರಿಯ ವಿರುಪಣ್ಣಗೌಡ ಅವರು ಮೂರು ವರ್ಷದ ಶಾಲಾ ಶುಲ್ಕ ಪಾವತಿಸಿಲ್ಲ ಅಂತ ಮಗನಿಗೆ ಶಾಲೆಯಲ್ಲಿ ಪ್ರವೇಶ ನೀಡುತ್ತಿಲ್ಲ ಮತ್ತು ವರ್ಗಾವಣೆ ಪ್ರಮಾಣ ಪತ್ರವನ್ನೂ ನೀಡುತ್ತಿಲ್ಲ ಎಂಬ ದೂರನ್ನು ಹೊತ್ತುತಂದಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪೀಠ ಆರ್.ಟಿ.ಇ ಸೆಕ್ಷನ್ (ಎ) ಪ್ರಕಾರ ಯಾವುದೇ ಮಗುವನ್ನು ಶುಲ್ಕ ಪಾವತಿಸಿಲ್ಲ ಎಂಬ ಕಾರಣದಿಂದ ಹೊರಹಾಕುವಂತಿಲ್ಲ ಎಂದು ನಿರ್ದೇಶನ ನೀಡಿದಲ್ಲದೆ ಮಗು ಬಯಸಿದಂತೆ ಅದೇ ಶಾಲೆಯಲ್ಲಿ ಒಂದು ವಾರದಲ್ಲಿ ಮರು ಪ್ರವೇಶಾತಿ ಒದಗಿಸಬೇಕು. ಇದಕ್ಕೆ ಒಪ್ಪದಿದ್ದಲ್ಲಿ ಸದರಿ ಶಾಲೆಯ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿತು.

ಬಳ್ಳಾರಿ ಜಿಲ್ಲೆಯ ಮೈಲೂರಿನ ಶಾಲೆಯಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇರುವುದಿಲ್ಲ ಎಂದು ದೂರುದಾರ ವೆಂಕಟೇಶ್ ಮನವಿಗೆ ಸ್ಪಂದಿಸಿದ ಆಯೋಗವು, 1 ದಿನದಲ್ಲಿ ಕುಡಿಯುವ ನೀರು ಮತ್ತು 3 ದಿನದಲ್ಲಿ ಶೌಚಾಲಯ ವ್ಯವಸ್ಥೆ ಮಾಡುವಂತೆ ಬಳ್ಳಾರಿ ಡಿಡಿಪಿಐ ಅವರಿಗೆ ನಿರ್ದೇಶನ ನೀಡಿತು. ಇತರೆ ಶಾಲೆಗಳಲ್ಲಿಯೂ ಕುಡಿಯುವ ನೀರು ಮತ್ತು ಶೌಚಾಲಯ ಸಮಸ್ಯೆಗಳಿಗೆ ಇದೇ ನಿರ್ದೇಶನ ಪಾಲಿಸಬೇಕು ಎಂದು ಸೂಚಿಸಿತು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ