ಅನ್ಯಧರ್ಮೀಯರಿಗೆ ಬೆಣ್ಣೆ, ಹಿಂದೂಗಳಿಗೆ ಸುಣ್ಣ ಎನ್ನುವ ತಾರತಮ್ಯವೇಕೆ: ಆರ್‌ ಅಶೋಕ್

Sampriya

ಮಂಗಳವಾರ, 10 ಸೆಪ್ಟಂಬರ್ 2024 (15:05 IST)
Photo Courtesy R Ashok
ಬೆಂಗಳೂರು: ಗಣೇಶೋತ್ಸವ ಪೆಂಡಾಲ್ ಗಳಲ್ಲಿ FSSAI ಮಾನ್ಯತೆ ಪಡೆದಿರುವ ವ್ಯಕ್ತಿ ಅಥವಾ ಸಂಸ್ಥೆಗಳು ತಯಾರಿಸಿದ ಪ್ರಸಾದ ಮಾತ್ರವೇ ವಿತರಿಸಬೇಕು ಎಂದು ಫರ್ಮಾನು ಹೊರಡಿಸಿದ್ದ ತುಘಲಕ್ ಸರ್ಕಾರ ಈಗ ಗಣೇಶ ಮೂರ್ತಿಗಳ ವಿಸರ್ಜನೆಯನ್ನ ರಾತ್ರಿ 10 ಗಂಟೆವರೆಗೆ ಮಾತ್ರ ಮಾಡಬೇಕು ಎಂಬ ಅರ್ಥವಿಲ್ಲದ ನಿಯಮ ಹೇರಿದೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಕೇಸರಿ ಕುಂಕುಮ ಕಂಡರೆ ಉರಿದು ಬೀಳುವ ಕಾಂಗ್ರೆಸ್ ನಾಯಕರಿಗೆ ಹಿಂದೂಗಳ ಹಬ್ಬ, ಜಾತ್ರೆ, ಉತ್ಸವಗಳೆಂದರೆ ಅದೇನೋ ಹೊಟ್ಟೆ ಉರಿ, ತಳಮಳ. ರಂಜಾನ್ ಸಂದರ್ಭದಲ್ಲಿ ನಡೆಯುವ ಇಫ್ತಾರ್ ಕೂಟಗಳಲ್ಲೆಲ್ಲಾ FSSAI ಮಾನ್ಯತೆ ಪಡೆದಿರುವ ಸಂಸ್ಥೆಗಳು, ವ್ಯಕ್ತಿಗಳೇ ಆಹಾರ ತಯಾರಿಸುತ್ತಾರಾ? ಕ್ರಿಸ್ಮಸ್ ಕೇಕ್ ತಯಾರಿಸುವವರೆಲ್ಲ FSSAI ಮಾನ್ಯತೆ ಪಡೆದಿರುತ್ತಾರಾ? ಅನ್ಯಧರ್ಮೀಯರಿಗೆ ಮಾತ್ರ ಬೆಣ್ಣೆ, ಹಿಂದೂಗಳಿಗೆ ಸುಣ್ಣ ಎನ್ನುವ ಈ ತಾರತಮ್ಯ ಏಕೆ? ಜಾತ್ಯತೀತತೆ ಅಂದರೆ ಇದೇನಾ? ಅಥವಾ ರಾಹುಲ್‌ ಅವರು ತೋರಿಸುವ ಸಂವಿಧಾನದಲ್ಲಿ ಹಿಂದೂಗಳು ಎರಡನೇ ದರ್ಜೆ ನಾಗರೀಕರು ಎಂದು ಬರೆಯಲಾಗಿದೆಯಾ?

ಸಣ್ಣ ಸಣ್ಣ ಬಡಾವಣೆಗಳಲ್ಲಿ, ಅಪಾರ್ಟ್ಮೆಂಟ್ ಗಳಲ್ಲಿ, ರಸ್ತೆಗಳ ಬದಿಯಲ್ಲಿ ಗಣೇಶ ಕೂರಿಸುವ ಪದ್ಧತಿ ಇದೆ. ಅವರೆಲ್ಲರೂ ಸಂಜೆ ಶಾಲಾ-ಕಾಲೇಜು, ಉದ್ಯೋಗ, ವ್ಯಾಪಾರದ ಕೆಲಸ ಮುಗಿದ ನಂತರ ಸಂಜೆ ಪೂಜೆ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಮೆರವಣಿಗೆ ಮೂಲಕ ವಿಸರ್ಜನೆ ಮಾಡುವ ಯೋಜನೆ ಹಾಕಿಕೊಂಡಿರುತ್ತಾರೆ. ಮೇಲಾಗಿ ರಾತ್ರಿ 8-9 ಗಂಟೆ ನಂತರ ಟ್ರಾಫಿಕ್ ಸಮಸ್ಯೆಯೂ ಇರುವುದಿಲ್ಲ. ಆಗ ಮೆರವಣಿಗೆ ಶುರು ಮಾಡಿದರೆ ವಿಸರ್ಜನೆ ಮಾಡುವ ವೇಳೆಗೆ ಕನಿಷ್ಠ ಪಕ್ಷ 11 ಗಂಟೆಯಾದರೂ ಆಗಿರುತ್ತದೆ.

ಈ ನಿಟ್ಟಿನಲ್ಲಿ ಸಾರ್ವಜನಿಕರ ಅನುಕೂಲ ಹಾಗು ಟ್ರಾಫಿಕ್ ಸಮಸ್ಯೆ ಗಮನದಲ್ಲಿಟ್ಟುಕೊಂಡು ಗಣೇಶ ವಿಸರ್ಜನೆ ಸಮಯವನ್ನ ರಾತ್ರಿ 11:30 ರವರೆಗೆ ವಿಸ್ತರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ