ಬೆಂಗಳೂರು: 26 ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗುವ ಆಸೆ ಈಡೇರಲಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ ಬೆನ್ನಲ್ಲೇ ಅವರು ಈಗ ಆ ಆಸೆ ಈಡೇರಿಸಿಕೊಳ್ತಾರಾ ಎಂಬ ಚರ್ಚೆ ಶುರುವಾಗಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ 26 ವರ್ಷದ ಹಿಂದೆ ನಡೆದ ಘಟನೆ ನೆನೆಸಿಕೊಂಡಿದ್ದರು. ಶಾಸಕಾಂಗ ಪಕ್ಷದ ನಾಯಕನಾಗಿ ಪಕ್ಷವನ್ನು ಗೆಲ್ಲಿಸಿದ್ದು ನಾನು. ಆದರೆ ಸಿಎಂ ಆಗಿದ್ದು ಎಸ್ಎಂ ಕೃಷ್ಣ. ಕಷ್ಟಪಟ್ಟ ನನಗೆ ಸಿಎಂ ಪಟ್ಟ ಸಿಗಲಿಲ್ಲ ಎಂದು ಖರ್ಗೆ ಬೇಸರಿಸಿಕೊಂಡಿದ್ದರು.
ಅವರು ಇಂತಹದ್ದೊಂದು ಹೇಳಿಕೆ ನೀಡಿರುವ ಬೆನ್ನಲ್ಲೇ ಈಗ ಖರ್ಗೆ ರಾಜ್ಯ ರಾಜಕೀಯಕ್ಕೆ ಬರುತ್ತಾರೆಯೇ ಎಂಬ ಚರ್ಚೆ ಶುರುವಾಗಿದೆ. ಕಾಂಗ್ರೆಸ್ ನಲ್ಲಿ ಒಂದು ಪಂಗಡ ದಲಿತರು ಸಿಎಂ ಆಗಬೇಕು ಎಂದು ಆಗ್ರಹಿಸುತ್ತಿದೆ. ಈ ನಡುವೆ ಡಿಕೆ ಶಿವಕುಮಾರ್ ಗೆ ಸಿಎಂ ಹುದ್ದೆ ಮೇಲೆ ಕಣ್ಣಿದೆ. ಆದರೆ ಇದಕ್ಕೆ ಸಿದ್ದರಾಮಯ್ಯ ಬಣದ ವಿರೋಧವಿದೆ. ಪಕ್ಷದಲ್ಲಿ ಎಲ್ಲರೂ ಒಪ್ಪಿಕೊಳ್ಳುವ ಅಭ್ಯರ್ಥಿ ಎಂದರೆ ಮಲ್ಲಿಕಾರ್ಜುನ ಖರ್ಗೆ.
ಒಂದು ವೇಳೆ ಸ್ವತಃ ಮಲ್ಲಿಕಾರ್ಜುನ ಖರ್ಗೆಯೇ ಸಿಎಂ ಅಭ್ಯರ್ಥಿ ಎಂದರೆ ಸಿದ್ದರಾಮಯ್ಯ ಬಣದ ಬೆಂಬಲವೂ ಸಿಗಲಿದೆ. ಹೀಗಾಗಿ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣದ ನಡುವೆ ಫೈಟ್ ಜೋರಾದರೆ ಖರ್ಗೆಯೇ ರಂಗಕ್ಕಿಳಿದರೂ ಅಚ್ಚರಿಯಿಲ್ಲ ಎಂಬ ಚರ್ಚೆ ರಾಜ್ಯ ಕಾಂಗ್ರೆಸ್ ನಲ್ಲಿ ಕೇಳಿಬರುತ್ತಿದೆ.