ಸಿಎಂ ಯೋಗಿ ಆದಿತ್ಯನಾಥ್ ನಮಾಜ್ ಮಾಡುತ್ತಾರೆಯೇ?: ಆಜಂಖಾನ್

ಶುಕ್ರವಾರ, 31 ಮಾರ್ಚ್ 2017 (19:02 IST)
ಸೂರ್ಯ ನಮಸ್ಕಾರ ಮತ್ತು ನಮಾಜ್ ಒಂದೇ ಎಂದು ಸಿಎಂ ಯೋಗಿ ಆದಿತ್ಯನಾಥ್ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಮಾಜವಾದಿ ಪಕ್ಷದ ನಾಯಕ ಆಜಂಖಾನ್, ಹಾಗಾದ್ರೆ ಯೋಗಿ ನಮಾಜ್ ಮಾಡುತ್ತಾರೆಯೇ ಎಂದು ತಿರುಗೇಟು ನೀಡಿದ್ದಾರೆ. 
 
ಮುಸ್ಲಿಮರು ಮಾಡುವ ನಮಾಜ್, ಸೂರ್ಯ ನಮಸ್ಕಾರದ ವಿವಿಧ ಭಂಗಿಗಳು ಹೋಲುತ್ತದೆ ಎನ್ನುವುದಕ್ಕೆ ಪ್ರತಿಕ್ರಿಯಿಸಿರುವ ಖಾನ್, ಇಂತಹ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರಿಂದ ಅವರಿಗೆ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.  
 
ಸೂರ್ಯ ನಮಸ್ಕಾರ ಮತ್ತು ನಮಾಜ್ ಒಂದೇ ಎಂದು ಹೇಳುವ ನೀವು ನಮಾಜ್ ಮಾಡಲು ಬಯಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.
 
ಮುಸ್ಲಿಮರು ಮಾಡುವ ನಮಾಜ್‌ಗೆ, ಹಿಂದೂಗಳು ಮಾಡುವ ಸೂರ್ಯ ನಮಸ್ಕಾರಕ್ಕೆ ಯಾವ ರೀತಿಯ ಹೋಲಿಕೆಯಾಗುತ್ತದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಇದರ ಹಿಂದೆ ದುರುದ್ದೇಶ ಕಂಡುಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಕಳೆದ ಬುಧವಾರದಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ, ಸೂರ್ಯ ನಮಸ್ಕಾರದಲ್ಲಿರುವ ಎಲ್ಲಾ ಭಂಗಿಗಳು, ಪ್ರಾಣಾಯಾಮಗಳು, ಮುಸ್ಲಿಂ ಸಹೋದರರು ಮಾಡುವ ನಮಾಜ್ ಒಂದೇ ರೀತಿಯಾಗಿವೆ.ಆದರೆ, ಅವನ್ನು ಒಂದಾಗಿಸುವ ಪ್ರಯತ್ನ ಯಾರು ಮಾಡಲಿಲ್ಲ. ಯಾಕೆಂದರೆ, ಕೆಲವರು ಭೋಗದಲ್ಲಿ ಮಾತ್ರ ಆಸಕ್ತಿ ತೋರುತ್ತಾರೆಯೇ ಹೊರತು ಯೋಗದಲ್ಲಿ ಅಲ್ಲ  ಎಂದು ತಿರುಗೇಟು ನೀಡಿದ್ದರು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ