ಸೋಫಿಯಾ ಖುರೇಷಿ ವಿರುದ್ಧ ನಾಲಗೆ ಹರಿಬಿಟ್ಟ ಸಚಿವ ವಿಜಯ್ ಶಾಗೆ ಕ್ಲಾಸ್‌ ತೆಗೆದುಕೊಂಡ ಸುಪ್ರೀಂಕೋರ್ಟ್‌

Sampriya

ಗುರುವಾರ, 15 ಮೇ 2025 (14:27 IST)
Photo Courtesy X
ನವದೆಹಲಿ: ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ನಾಲಗೆ ಹರಿಬಿಟ್ಟಿದ್ದ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ವಿಜಯ್ ಶಾ ನೀಡಿದ ಹೇಳಿಕೆಗಳನ್ನು ಟೀಕಿಸಿದ ಸುಪ್ರೀಂ ಕೋರ್ಟ್, ದೇಶವು ಉದ್ವಿಗ್ನ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಸಚಿವರು ಜವಾಬ್ದಾರಿಯುತರಾಗಿರಬೇಕು ಎನ್ನುವುದು ನಮ್ಮೆಲ್ಲರ ನಿರೀಕ್ಷೆ ಎಂದು ಕ್ಲಾಸ್‌ ತೆಗೆದುಕೊಂಡಿದೆ.

ಹೇಳಿಕೆ ಸಂಬಂಧ ವಿಚಾರಣೆ ನಡೆಸಿದ್ದ ಜಬ್ಬಲ್ಪುರ ಹೈಕೋರ್ಟ್, ಸಚಿವ ವಿಜಯ್ ಶಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿತ್ತು. ಈ ಆದೇಶದ ಬೆನ್ನಲ್ಲೇ ವಿಜಯ್ ಶಾ, ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಇಂದೋರ್ ಜಿಲ್ಲೆಯ ಮಾಹುವಿನ ರಾಯ್ಕುಂಡ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯ್ ಶಾ ಅವರು ಪಾಕಿಸ್ತಾನ ವಿರುದ್ಧ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಯಶಸ್ಸನ್ನು ಹೇಳಿ ಮೋದಿ ಸರ್ಕಾರವನ್ನು ಶ್ಲಾಘಿಸಿದ್ದರು. ಇದೇ ವೇಳೆ ಮಾತು ಮುಂದುವರಿಸಿ, ಭಯೋತ್ಪಾದಕರು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದ್ದರು. ಆ ಉಗ್ರರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನು ನಾವು ಕಳುಹಿಸಿದ್ದೇವೆ ಎಂದು ನಿಂದಿಸಿದ್ದರು.

ಭಾಷಣದಲ್ಲಿ ವಿಜಯ್ ಶಾ ಮುಸ್ಲಿಂ ಸಮುದಾಯಕ್ಕೆ ಸೇರಿದ ಉಗ್ರರನ್ನು ಸದೆ ಬಡಿಯಲು ಮುಸ್ಲಿಂ ಸಮುದಾಯಕ್ಕೆ ಸೇರಿದ ಕರ್ನಲ್ ಸೋಫಿಯಾ ಖುರೇಷಿ ಅವರ ಹೆಸರನ್ನು ಸ್ಪಷ್ಟವಾಗಿ ಹೇಳದೇ ಇದ್ದರೂ ಅವರನ್ನು ಉಲ್ಲೇಖಿಸಿಯೇ ಭಾಷಣ ಮಾಡಿದ್ದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ