100 ರೂಪಾಯಿ, ಬಿರಿಯಾನಿಗಾಗಿ 42 ಬಸ್‌ಗಳಿಗೆ ಬೆಂಕಿ

ಸೋಮವಾರ, 19 ಸೆಪ್ಟಂಬರ್ 2016 (14:44 IST)
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ತಮಿಳುನಾಡು ಮೂಲದ ಉದ್ಯಮಪತಿಗೆ ಸೇರಿದ್ದ ಕೆ.ಪಿ.ಎನ್ ಟ್ರಾವೆಲ್ಸ್‌ನ 42 ಬಸ್‌ಗಳಿಗೆ ಬೆಂಕಿ ಹಚ್ಚಿದ ಆರೋಪದ ಮೇಲೆ ಬಂಧಿತಳಾಗಿರುವ ಯಾದಗಿರಿ ಮೂಲದ ಯುವತಿ ನೀಡಿರುವ ಹೇಳಿಕೆ ನಿಮ್ಮನ್ನು ಒಂದು ಕ್ಷಣ ಆಘಾತಕ್ಕೆ ದೂಡದೇ ಬಿಡದು.

ಸೆಪ್ಟೆಂಬರ್ 12 ರ ಘಟನೆಗೆ ಸಂಬಂಧಿಸಿದಂತೆ ಬಂಧನಕ್ಕೊಳಪಟ್ಟಿರುವ 11 ಜನರಲ್ಲಿ ಒಬ್ಬಳಾಗಿರುವ ಸಿ. ಭಾಗ್ಯಳಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ 100 ರೂಪಾಯಿ ಮತ್ತು ಒಂದು ಪ್ಲೇಟ್ ಬಿರಿಯಾನಿ ಕೊಡಿಸುವುದಾಗಿ ಹೇಳಿ ಒಪ್ಪಿಸಲಾಗಿತ್ತು ಎಂಬ ದಂಗು ಬಡಿಸುವ ಸತ್ಯವನ್ನು ಹೊರಬಿದ್ದಿದೆ.
 
ಸಂಘಟನೆಯೊಂದರ ಜತೆ ಗುರುತಿಸಿಕೊಂಡಿರುವ ಭಾಗ್ಯ  ಬಸ್‌ಗಳಿಗೆ ಬೆಂಕಿ ಹಚ್ಚುವ ಸಂದರ್ಭದಲ್ಲಿ ತಾನು ಅಲ್ಲಿರುವುದನ್ನು ಒಪ್ಪಿಕೊಂಡಿದ್ದಾಳೆ. ಬಂಧಿತರಲ್ಲಿ ಇಬ್ಬರು ಅಪ್ರಾಪ್ತರಿದ್ದಾರೆ.
 
100 ರೂಪಾಯಿ ಮತ್ತು 1 ಪ್ಲೇಟ್ ಮಟನ್ ಬಿರಿಯಾನಿ ಕೊಡಿಸುವುದಾಗಿ ಹೇಳಿ ನನ್ನ ಮಗಳ ಸ್ನೇಹಿತರು ಆಕೆಯನ್ನು ಪುಸಲಾಯಿಸಿದ್ದರು ಎಂದು ಭಾಗ್ಯ ತಾಯಿ ಎಲ್ಲಮ್ಮ ಹೇಳಿದ್ದಾಳೆ. ತನ್ನ ಪೋಷಕರ ಜತೆ ಗಿರಿನಗರದಲ್ಲಿ ವಾಸಿಸುವ ಭಾಗ್ಯ ದಿನಗೂಲಿ ಕಾರ್ಮಿಕಳಾಗಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ