ಬುಕ್ಕಿಂಗ್‌ ರದ್ದು ಮಾಡಿದ್ದಕ್ಕೇ ಮಹಿಳೆ ಮೇಲೆ ಹಲ್ಲೆ: ಆಟೋ ಚಾಲಕ ಪೊಲೀಸ್‌ ವಶಕ್ಕೆ

Sampriya

ಶುಕ್ರವಾರ, 6 ಸೆಪ್ಟಂಬರ್ 2024 (14:02 IST)
Photo Courtesy X
ಬೆಂಗಳೂರು: ಬಾಡಿಗೆಗೆ ಬುಕ್ಕಿಂಗ್‌ ಮಾಡಿ ನಂತರ ಕ್ಯಾನ್ಸಲ್ ಮಾಡಿದ್ದಕ್ಕೆ ಆಟೊ ಚಾಲಕ ಕೋಪಗೊಂಡು ಯುವತಿ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕನನ್ನು ಶುಕ್ರವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಆಟೋ ಚಾಲಕ ಕೋಪಗೊಂಡು ಯುವತಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿದ ಘಟನೆ ಸೆ.2ರಂದು ನಡೆದಿತ್ತು.

ಇದೀಗ ಆಟೋ ಚಾಲಕ ನಿಂದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದೀಗ ಚಾಲಕನ ವಿರುದ್ಧ ಕ್ರಮ ಕೈಗೊಂಡಿರುವ ಮಾಗಡಿರಸ್ತೆ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಘಟನೆಯ ಹಿನ್ನೆಲೆ: ಯುವತಿ ಹಾಗೂ ಆಕೆಯ ಸ್ನೇಹಿತ ಇಬ್ಬರೂ ಓಲಾ ಆಟೋವನ್ನು ಬುಕ್ ಮಾಡಿದ್ದರು. ಸಕಾಲಕ್ಕೆ ಆಟೋ ಬಾರದ ಹಿನ್ನೆಲೆ ಮತ್ತೊಂದು ಆಟೋವನ್ನು ಬುಕ್ ಮಾಡಿದ್ದರು. ಬಳಿಕ ಮುಂಚಿತವಾಗಿ ಬಂದ ಆಟೋವನ್ನು ಹತ್ತಿ, ಈ ಹಿಂದೆ ಬುಕ್ ಮಾಡಿದ್ದ ಆಟೋವನ್ನು ಯುವತಿ ರದ್ದು ಮಾಡಿದ್ದಳು. ಇದನ್ನು ಗಮನಿಸದ ಆಟೋ ಚಾಲಕ ಯುವತಿಯನ್ನ ಹಿಂಬಾಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾನೆ.

ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ವಿಡಿಯೋವನ್ನು ಮಾಡಿಕೊಂಡಿದ್ದ ಯುವತಿ, ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಹಂಚಿಕೊಂಡು ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿದ್ದಳು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಪರಿಶೀಲಿಸಿದ ಪೊಲೀಸರು, ಆಟೋ ಚಾಲಕ ಮುತ್ತುರಾಜ್ ಎಂಬಾತನನ್ನ ಕರೆಯಿಸಿ ವಿಚಾರಣೆ ನಡೆಸಿದ್ದಾರೆ.

ಅಂತೆಯೇ ಸಂತ್ರಸ್ಥ ಯುವತಿಗೂ ಪೊಲೀಸರು ನೊಟೀಸ್ ನೀಡಿ ವಿಚಾರಣೆಗೆ ಬರಲು ಸೂಚಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ