ಇಂತಹದ್ದೊಂದು ಕೌತುಕಕ್ಕೆ ಆಂಧ್ರ ಪ್ರದೇಶದಿಂದ ಉಡುಪಿಗೆ ಬಂದ ಬಸವ ಕಾರಣವಾಗಿದ್ದಾನೆ. ಏನಪ್ಪಾ ಈ ಬಸವನಲ್ಲಿ ವಿಶೇಷ ಎಂದರೆ, ಸಾಮಾನ್ಯವಾಗಿ ಜಾನುವಾರುಗಳಿಗೆ ನಾಲ್ಕು ಕಾಲು, ಎರಡು ಕೋಡು ಇರುತ್ತವೆ. ಆದರೆ, ಈ ಬಸವನಿಗೆ ಐದು ಕಾಲುಗಳಿವೆ! ದನ-ಕರುಗಳಿಗೆ ಐದು ಕಾಲುಗಳು ಇರುವುದು ತೀರಾ ಅಪರೂಪ. ಗೋಗಳು ದೈವೀ ಸ್ವರೂಪ ಎಂದು ನಂಬಿರುವ ಧರ್ಮಿಷ್ಟರಿಗೆ ಈ ಬಸವ ಸಾಕ್ಷಾತ್ ಭಗವಂತನಂತೆಯೇ ಕಂಡು ಬರುತ್ತಿದ್ದಾನೆ.
ಈ ವಿಶೇಷ ಬಸವ ಶ್ರೀಕೃಷ್ಣ ಮಠದ ಆಸು-ಪಾಸು ಓಡಾಡಿಕೊಂಡಿದ್ದಾನೆ. ಈತನ ಬಗ್ಗೆ ಮಾಹಿತಿಯಿದ್ದವರು ಎಲ್ಲಿದ್ದಾನೆ ಎಂದು ಹುಡುಕಿಕೊಂಡು ಹೋಗಿ, ಹಣೆ ಮೇಲೆ ಗಂಧ ಹಚ್ಚಿ ಪಾದ ತೊಳೆದು ಪೂಜೆ ಮಾಡುತ್ತಾರೆ. ತಿನ್ನಲು ಬಾಳೆಹಣ್ಣು ಇತ್ಯಾದಿಗಳನ್ನು ನೀಡಿ ಕೃತಾರ್ಥರಾಗುತ್ತಿದ್ದಾರೆ. ಈತನನ್ನು ಸಾವಿತ್ರಿ ಎಂಬಾಕೆ ಆಂಧ್ರ ಪ್ರದೇಶದಿಂದ ಕರೆದುಕೊಂಡು ಬಂದಿದ್ದು, ಐದು ಕಾಲಿನ ಬಸವನ ಬಗ್ಗೆ ಪ್ರಚಾರ ಮಾಡುತ್ತಿದ್ದಾಳೆ. ಆ ಮೂಲಕ ಸೃಷ್ಟಿ ವೈಚಿತ್ರ್ಯ ತಿಳಿಸುತ್ತ, ತನ್ನ ಹೊಟ್ಟೆಪಾಡನ್ನು ನೋಡಿಕೊಳ್ಳುತ್ತಿದ್ದಾಳೆ.
ಉಡುಪಿಗೆ ಬಂದು ತಿಂಗಳು ಸಮೀಪಿಸುತ್ತಿದ್ದು ಇನ್ನಷ್ಟು ದಿನ ಬಸವನ ಜತೆ ಅಲ್ಲಿಯೇ ತಂಗಲು ನಿರ್ಧರಿಸಿದ್ದಾಳೆ. ನಂತರ ಧರ್ಮಸ್ಥಳ, ಹೊರನಾಡು, ಶ್ರಂಗೇರಿ, ಗೋಕರ್ಣ, ಕೊಲ್ಲೂರು ಹೀಗೆ ಕರ್ನಾಟಕ ಆಯ್ದ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಐದು ಕಾಲಿನ ಬಸವನ ಬಗ್ಗೆ ಪ್ರಚಾರ ಮಾಡಲಿದ್ದಾಳೆ.