ಸಾರಿಗೆ ಸಂಸ್ಥೆಗಳನ್ನು ಮುಚ್ಚುವ ಸ್ಥಿತಿಗೆ ತಂದಿಟ್ಟಿರುವ ಕೀರ್ತಿ ಯಡಿಯೂರಪ್ಪ, ಬೊಮ್ಮಾಯಿಗೆ ಸಲ್ಲುತ್ತದೆ

Sampriya

ಸೋಮವಾರ, 2 ಸೆಪ್ಟಂಬರ್ 2024 (15:57 IST)
Photo Courtesy X
ಬೆಂಗಳೂರು: ಸಾರಿಗೆ ಸಂಸ್ಥೆಗಳಿಗೆ ಡಕೋಟ ಬಸ್‌ಗಳನ್ನು ಕಲ್ಪಿಸಿದ ಕೀರ್ತಿ ಬಿಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಬೇಕೆಂದು ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.

ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಕೆಟ್ಟು ನಿಲ್ಲುತ್ತಿವೆ, ಅದಲ್ಲದೆ ಬಸ್‌ನಲ್ಲಿ ನಿತ್ಯವೂ ಒಂದಿಲ್ಲೊಂದು ಸಮಸ್ಯೆಗಳನ್ನು ನಾಡಿನ ಜನರು ಎದುರಿಸುತ್ತಿದ್ದಾರೆ ಎಂದು ಬಿಜೆಪಿ ಹೇಳಿತ್ತು. ಅದಲ್ಲದೆ ಕಾರ್ಕಳದಿಂದ ಉಡುಪಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿ ಬಸ್‌ನ ಫುಟ್ ಬೋರ್ಡ್‌ ಕಳಚಿದ್ದು ಅದನ್ನು ಬಿಜೆಪಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಇದೀಗ ಇದಕ್ಕೆ ಕೌಂಟರ್ ಕೊಟ್ಟ ಕಾಂಗ್ರೆಸ್, ಇದೆಲ್ಲ ಬಿಜೆಪಿ ಸರ್ಕಾರದಲ್ಲಿದ್ದಾಗ ಆದ ಎಫೆಕ್ಟ್‌ಗಳು ಈಗ ಪರಿಣಮಿಸುತ್ತಿದೆ ಎಂದಿದೆ.

ಕಾಂಗ್ರೆಸ್‌ ಟ್ವೀಟ್‌ನಲ್ಲಿ ಹೀಗಿದೆ:  ಬಿ‌.ಜೆ.ಪಿಯವರೇ ಟ್ವೀಟ್ ಮಾಡುವುದರಿಂದ‌ ತಮ್ಮ ದುರಾಡಳಿತದ ಪ್ರದರ್ಶನವಾಗಲಿ ಎಂಬ ತಮ್ಮ ಸದಾಶಯಕ್ಕೆ ಧನ್ಯವಾದಗಳು.

ಶ್ರೀ ಯಡಿಯೂರಪ್ಪ‌ ಹಾಗೂ ಶ್ರೀ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ
ಸಾರಿಗೆ ಸಂಸ್ಥೆಗಳಿಗೆ ಡಕೋಟ ಬಸ್ಸುಗಳನ್ನು ಕಲ್ಪಿಸಿದ ಕೀರ್ತಿ ಅವರಿಗೆ ಸಲ್ಲಬೇಕು.

ಸಾರಿಗೆ ಸಂಸ್ಥೆಗಳನ್ನು ₹5900 ಕೋಟಿ ನಷ್ಟದಲ್ಲಿಟ್ಟು ಹೋಗಿರುವ ಹೆಗ್ಗಳಿಕೆ ತಮ್ಮದೇ..

ಕಳೆದ 5 ವರ್ಷಗಳಲ್ಲಿ ಬಿ.ಎಂ.ಟಿ ಸಿ‌ ಹೊರತುಪಡಿಸಿ ಬೇರೆ ಯಾವುದೇ‌ ಸಾರಿಗೆ ನಿಗಮಗಳಿಗೆ ಬಸ್‌ಗಳ ಸೇರ್ಪಡೆಯೇ ಮಾಡದೆ, ಡಕೋಟ ಬಸ್ಸುಗಳನ್ನು ಕಾರ್ಯಾಚರಣೆ‌ ಮಾಡಲು ಬಿಟ್ಟು ಹೋಗಿರುವ ಬಿ.ಜೆ.ಪಿ‌ಯವರೇ.

ನಮ್ಮ ಸರ್ಕಾರ 5800 ಬಸ್ಸುಗಳ ಸೇರ್ಪಡೆಗೆ ಅನುಮೋದನೆ ನೀಡಿದ್ದು, ಕಳೆದೊಂದು ವರ್ಷದಲ್ಲಿಯೇ 3000  ಹೊಸ ಬಸ್ಸುಗಳ ಸೇರ್ಪಡೆಯಾಗಿದೆ.

ಡಕೋಟಾ ಬಸ್ಸುಗಳನ್ನು‌ ಪುನಶ್ಚೇತನ‌ ಮಾಡುವ ಕಾರ್ಯವನ್ನು ಸಹ ಕೈಗೆತ್ತಿಕೊಂಡು 1300 ಬಸ್ಸುಗಳ ಪುನಶ್ಚೇತನ ‌ಕಾರ್ಯ‌ಮಾಡಿದ್ದೇವೆ.

ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಶ್ರೀ ಯಡಿಯೂರಪ್ಪ‌ ಹಾಗೂ ಶ್ರೀ. ಬೊಮ್ಮಾಯಿ ಮಾನ್ಯ ಮುಖ್ಯಮಂತ್ರಿಗಳಾಗಿದ್ದಾಗ ಕಳೆದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 13888 ಹುದ್ದೆಗಳು ಖಾಲಿ ಇದ್ದರೂ ( ನಿವೃತ್ತಿ ಇನ್ನಿತರೆ ಕಾರಣಗಳಿಂದ ) ಒಂದೇ ಒಂದು‌ ನೇಮಕಾತಿ ಮಾಡಿಲ್ಲ.

ಒಂದೇ  ವರ್ಷದ ನಮ್ಮ  ಅವಧಿಯ ಆಡಳಿತದಲ್ಲಿ ಬಿ.ಜೆ.ಪಿಯ ದುರಾಡಳಿತದ  ಕರ್ಮಕಾಂಡಗಳನ್ನು ಸಂಪೂರ್ಣವಾಗಿ ತೊಳೆದು ಶುದ್ಧ ಮಾಡಲು ಐದು ವರ್ಷದ ಅವಧಿಯು ಸಾಲದಾಗಿದೆ. ಸಾರಿಗೆ ಸಂಸ್ಥೆಗಳನ್ನು ಮುಚ್ಚುವ ಸ್ಥಿತಿಗೆ ತಂದು , ಈಗ ನೀವು ಟ್ಟೀಟ್ ಮೂಲಕ ತಮ್ಮ ದುರಾಡಳಿತದ ಕಾರ್ಯವೈಖರಿಯನ್ನು ಜನರ ಮುಂದೆ ಇಡಲು ಇಚ್ಛೆ ಹೊಂದಿದ್ದಲ್ಲಿ ಮುಕ್ತವಾಗಿ ಸ್ವಾಗತಿಸುತ್ತೇವೆ‌.

ಬಿ.ಜೆ.ಪಿ ಅವರು ತಮ್ಮ ಆಡಳಿತದ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳಿಗೆ ದಯಪಾಲಿಸಿದ ಡಕೋಟಾ ಬಸ್ಸುಗಳ‌ ಚಿತ್ರಣವನ್ನು ಪ್ರಚಾರ ಮಾಡುತ್ತಾ ನಾವು ಯಾವ ಸ್ಥಿತಿಯಲ್ಲಿ‌ ಸಾರಿಗೆ ಸಂಸ್ಥೆಗಳನ್ನು ನಡೆಸಿ, ಬಿಟ್ಟುಕೊಟ್ಟಿದ್ದೇವೆ ಅನ್ನವುದನ್ನು ಜನರಿಗೆ ಮನವರಿಕೆ ಮಾಡಿ ಕೊಡುತ್ತಿರುವುದಕ್ಕೆ ಮತ್ತೊಮ್ಮೆ ಮಗದೊಮ್ಮೆ ಧನ್ಯವಾದಗಳು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ