ಕರಾವಳಿ, ಮಲೆನಾಡು ಸೇರಿ ಹಲವು ಜಿಲ್ಲೆಗಳಿಗೆ ಆಗಸ್ಟ್ 31ರಂದು ಯೆಲ್ಲೋ ಅಲರ್ಟ್

ಸೋಮವಾರ, 30 ಆಗಸ್ಟ್ 2021 (21:02 IST)
ಬೆಂಗಳೂರು:  ಕರ್ನಾಟಕ ಮತ್ತು ಕೇರಳ ಕರಾವಳಿಯಲ್ಲಿ ಕಡಿಮೆ ಒತ್ತಡವಿರುವ ವಿಸ್ತರಿಸಿದ ಪ್ರದೇಶವಿದೆ. ಈ  ಪ್ರಭಾವದಿಂದ ಕರಾವಳಿ, ಮಲೆನಾಡು, ಬೀದರ್, ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಆ.31ರಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ ಎಂದು  ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
 
ಆಗಸ್ಟ್ 31ರಿಂದ ಸೆಪ್ಟೆಂಬರ್ 3 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಹಾಗೂ ದಕ್ಷಿಣ ಒಳನಾಡಿನಲ್ಲಿ ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆಯಾಗುವ ಹೆಚ್ಚಿನ ಸಾಧ್ಯತೆಯಿದೆ. ಆಗಸ್ಟ್ 31ರಂದು ಉತ್ತರ ಒಳನಾಡಿನಲ್ಲಿ ಬಹುತೇಕ ಎಲ್ಲಾ  ಸ್ಥಳಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ಸೆಪ್ಟೆಂಬರ್ 1ರಿಂದ 3ರ ವರೆಗೆ ಕೆಲವು ಕಡೆ ಮಾತ್ರ ಮಳೆಯಾಗಲಿದೆ ಎಂದಿದ್ದಾರೆ.
 
ನೈರುತ್ಯ ಮುಂಗಾರು ಸೋಮವಾರ ರಾಜ್ಯದ ಉತ್ತರ ಒಳನಾಡಿನಲ್ಲಿ ಅತಿ ಚುರುಕು ಹಾಗೂ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಚುರುಕಾಗಿತ್ತು. ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಹಾಗೂ ಒಳನಾಡಿನ ಬಹುತೇಕ ಸ್ಥಳಗಳಲ್ಲಿ ಮಳೆಯಾಗಿದೆ ಎಂದು ಹೇಳಿದ್ದಾರೆ.
 
ಕಲಬುರ್ಗಿಯ ಗಾಣಗಾಪುರದಲ್ಲಿ 8 ಸೆಂ.ಮೀ, ಉಡುಪಿಯ ಕೋಟ, ಕಲಬುರ್ಗಿಯ ಚಿಂಚೋಳಿ, ಬೀದರ್‌ನ ಭಾಲ್ಕಿ, ಮನ್ನಳ್ಳಿಯಲ್ಲಿ ತಲಾ 7 ಸೆಂ.ಮೀ, ಬೀದರ್‌ನ ನಿರ್ನ, ರಾಮನಗರದ ಕನಕಪುರ, ಆಗುಂಬೆಯಲ್ಲಿ ತಲಾ 6 ಸೆಂ.ಮೀ, ದಕ್ಷಿಣ ಕನ್ನಡದ ಸುಬ್ರಹ್ಮಣ್ಯ, ಉಡುಪಿಯ ಕುಂದಾಪುರ, ಉತ್ತರ ಕನ್ನಡದ ಮಂಕಿ, ಭಟ್ಕಳ, ಕಲಬುರ್ಗಿಯ ಗುಂಡಗುರ್ತಿ ಹಾಗೂ ಸೇಡಂ ತಲಾ 5  ಸೆಂ.ಮೀ, ಮಳೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
 
ರಾಜಧಾನಿಯಲ್ಲಿ ಎರಡು ದಿನ ಮಳೆ: 
 
ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮಳೆಯಾಗುವ ಹೆಚ್ಚಿನ ನಿರೀಕ್ಷೆಯಿದೆ. ಗರಿಷ್ಠ ಉಷ್ಣಾಂಶ 27 ಹಾಗೂ ಕನಿಷ್ಠ ಉಷ್ಣಾಂಶ 20 ಡಿ.ಸೆ. ಇರಲಿದೆ ಎಂದು ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ