ಎತ್ತಿನಹೊಳೆ ಯೋಜನೆಯಿಂದ ಯಾವುದೇ ತೊಂದರೆ ಇಲ್ಲ

ಮಂಗಳವಾರ, 27 ಡಿಸೆಂಬರ್ 2016 (10:57 IST)
ಎತ್ತಿನಹೊಳೆ ಯೋಜನೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಯಾವುದೇ ತೊಂದರೆ ಆಗದು. ಸಮಸ್ಯೆ ಎದುರಾಗದಂತೆ ಸರ್ಕಾರ ನೋಡಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಎತ್ತಿನಹೊಳೆ ಯೋಜನೆ ಉದ್ದೇಶ ಮತ್ತು ವಸ್ತುಸ್ಥಿತಿ ಮನವರಿಕೆ ಮಾಡಿಕೊಡುವ ಹಿನ್ನೆಲೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಯವರು ಸಭೆ ಕರೆದಿದ್ದರು.
 
ಸಭೆಯಲ್ಲಿ ಭಾಗವಹಿಸಿದ್ದ ಉಭಯ ಜಿಲ್ಲೆಗಳ ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಮುಖಂಡರು ಮತ್ತು ನಾನಾ ಸಂಘಟನೆಗಳ ಪದಾಧಿಕಾರಿಗಳಿಗೆ ಮುಖ್ಯಮಂತ್ರಿಯವರು ಈ ಭರವಸೆ ನೀಡಿದರು. ದಕ್ಷಿಣ ಕನ್ನಡ, ಉಡುಪಿ, ಮೈಸೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳನ್ನೂ ಸಮಾನವಾಗಿ ನೋಡುತ್ತೇವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರಿಗೆ ತೊಂದರೆ ನೀಡುವ ಉದ್ದೇಶದಿಂದ ಎತ್ತಿನಹೊಳೆ ಯೋಜನೆ ರೂಪಿಸಿಲ್ಲ. ಇಷ್ಟಕ್ಕೂ ಯೋಜನೆಯಿಂದ ಎರಡೂ ಜಿಲ್ಲೆಗಳಿಗೆ ಯಾವುದೇ ಸಮಸ್ಯೆಯೂ ಆಗುವುದಿಲ್ಲ ಎಂದು ತಿಳಿಸಿದರು.
 
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. 2 ಸಾವಿರ ಅಡಿಗಳವರೆಗೆ ಕೊಳವೆ ಬಾವಿ ಕೊರೆದರೂ ನೀರು ಸಿಗದಂತಹ ಸನ್ನಿವೇಶ ನಿರ್ಮಾಣವಾಗಿದೆ. ಕುಡಿಯುವ ನೀರಿಗಾಗಿ ಅಲ್ಲಿಯ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ನೆರವಾಗಬೇಕಾದ್ದು ಸರ್ಕಾರದ ಕರ್ತವ್ಯ ಅಲ್ಲವೇ ? ಎಂದರು.
 
ಈ ಕಾರಣಕ್ಕಾಗಿ ಎತ್ತಿನಹೊಳೆ ಯೋಜನೆಯನ್ನು ರೂಪಿಸಲಾಗಿದೆ. ಕೆರೆಗಳಿಗೆ ನೀರು ತುಂಬಿಸುವುದು ಯೋಜನೆಯ ಉದ್ದೇಶವೇ ಹೊರತು ವ್ಯವಸಾಯಕ್ಕೆ ನೀರು ಕೊಡುವುದಲ್ಲ ಎಂದು ಮುಖ್ಯಮಂತ್ರಿಯವರು ಸ್ಪಷ್ಟಪಡಿಸಿದರು.
 
ತಜ್ಞರ ವರದಿ ಪ್ರಕಾರ ಎತ್ತಿನಹೊಳೆಯಲ್ಲಿ ಜುಲೈನಿಂದ ಅಕ್ಟೋಬರ್ ವರೆಗೆ 24 ಟಿಎಂಸಿ ನೀರು ಲಭ್ಯವಾಗುತ್ತದೆ. ಅದರಲ್ಲಿ 15 ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕೆ 64 ಲಕ್ಷ ಮಂದಿಗೆ ಸರಬರಾಜು ಮಾಡಲಾಗುವುದು. ಉಳಿದದ್ದನ್ನು ಕೆರೆಗಳನ್ನು ತುಂಬಿಸಲು ಬಳಕೆ ಮಾಡಿಕೊಳ್ಳಲಾಗುವುದು. ಆದ್ದರಿಂದ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಕಲ್ಪನೆ ಯಾರಲ್ಲೂ ಬೇಡ ಎಂದು ಮುಖ್ಯಮಂತ್ರಿಯವರು ಮನವಿ ಮಾಡಿದರು.
 
ಯೋಜನೆ ರೂಪುಗೊಂಡಿದ್ದು 2012ರಲ್ಲಿ, ಕರಾವಳಿಯ ಜನರಿಗೆ ತೊಂದರೆ ಕೊಡಲು ಅಂದಿನ ಸರ್ಕಾರ ಈ ಯೋಜನೆ ಜಾರಿಗೆ ಮುಂದಾಗಿತ್ತೇ ? ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದ್ದರೆ ಸರ್ಕಾರ ಪರಿಹರಿಸಲಿದೆ. ಒಟ್ಟಿನಲ್ಲಿ ಯೋಜನೆ ಅನುಷ್ಠಾನದ ವಿಚಾರದಲ್ಲಿ ನಮಗೆ ಹೋರಾಟಗಾರರ ಸಹಕಾರವೂ ಬೇಕು ಎಂದು ಹೇಳಿದರು.
 
ಯೋಜನೆ ಕುರಿತು ತಾಂತ್ರಿಕ ಪರಿಣಿತರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಗುವುದು. ಈ ವಿಷಯದಲ್ಲಿ ಅನುಮಾನಗಳಿದ್ದರೆ ಎರಡೂ ಜಿಲ್ಲೆಗಳ ಜನಪ್ರತಿನಿಧಿಗಳೊಂದಿಗೆ ಮತ್ತೆ ಚರ್ಚೆ ನಡೆಸಲು ಸಿದ್ಧ ಎಂದು ತಿಳಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ