ಛೋಟಾ ರಾಜನ್, ಚೀನಾ, ಥೈಲೆಂಡ್, ಸಿಂಗಾಪೂರ್ ದೇಶಗಳಲ್ಲಿ ಅತ್ಯಾಧುನಿಕ ಹೋಟೆಲ್‌ಗಳ ಮಾಲೀಕನಾಗಿದ್ದು, ಸಿಂಗಾಪೂರದಲ್ಲಿ ಕೆಲ ಚಿನ್ನಾಭರಣಗಳ ಮಳಿಗೆಗಳನ್ನು ಹೊಂದಿದ್ದಾನೆ. ಜಿಂಬಾಬ್ವೆ ಸೇರಿದಂತೆ ಆಫ್ರಿಕಾದ ರಾಷ್ಟ್ರಗಳಲ್ಲಿ ವಜ್ರ ವ್ಯಾಪಾರದಲ್ಲಿ ಹೂಡಿಕೆ ಮಾಡಿದ್ದಾನೆ.ಭೂಗತ ದೊರೆ ಛೋಟಾ ರಾಜನ್ ಒಟ್ಟು ಆಸ್ತಿ 4000-5000 ಕೋಟಿ ರೂಪಾಯಿಗಳಷ್ಟಾಗಿದ್ದು, ಶೇ.50ರಷ್ಟು ಹೂಡಿಕೆಯನ್ನು ಭಾರತದಲ್ಲಿ ಹೊಂದಿದ್ದಾನೆ ಎಂದು ಮುಂಬೈ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಜನ್, ಜಿಂಬಾಬ್ವೆ ದೇಶದಲ್ಲಿ ನೆಲಸಲು ಅಲ್ಲಿನ ಅಧಿಕಾರಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬಯಸಿದ್ದನು. ಆದರೆ, ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ರಾಜನ್‌ಗೆ ಆಶ್ರಯ ನೀಡಲು ಜಿಂಬಾಬ್ವೆ ನಿರಾಕರಿಸಿತ್ತು. ಝಡ್‌ಪ್ಲಸ್ ಶ್ರೇಣಿಯ ಭದ್ರತೆಗಾಗಿ ಕೂಡಾ ಕೋರಿದ್ದನು ಎನ್ನಲಾಗಿದೆ. ಆದರೆ, ಜಿಂಬಾಬ್ವೆ ಅಧಿಕಾರಿಗಳು ನಿರಾಕರಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದಲ್ಲಿ ಛೋಟಾ ರಾಜನ್ ವಿರುದ್ಧ ಮೋಕಾ ಅಡಿಯಲ್ಲಿ 75 ಪ್ರಕರಣಗಳು ದಾಖಲಾಗಿದ್ದು, ಹೆಚ್ಚು ಪ್ರಕರಣಗಳು ದಾಖಲಾಗಿದ್ದರಿಂದ, ಮೂರು ವರ್ಷಗಳವರೆಗೆ ವಿಚಾರಣೆ ನಡೆಯುವ ಸಾಧ್ಯತೆಗಳಿವೆ ಎಂದು ಮುಂಬೈ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.