ಮದ್ಯದ ಬಾಟೆಲ್ ಹಿಡಿದು ಮಹಿಳೆಯರ ಹೈಡ್ರಾಮ
ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಆಯ್ತು. ಇದೀಗ ಮದ್ಯ ತರಲು ಮಹಿಳೆಯರಿಗೆ ಅವಕಾಶ ಕೊಡಿ ಅಂತ ಮಹಿಳೆಯರು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಗದಗದಲ್ಲಿ ನಡೆದಿದೆ. ಹುಬ್ಬಳ್ಳಿಯಿಂದ ಗದಗಗೆ ಬರ್ತಿದ್ದ ಸಾರಿಗೆ ಸಂಸ್ಥೆ ಬಸ್ ನಲ್ಲಿ ಈ ಘಟನೆ ನಡೆದಿದೆ. ನಿವೃತ್ತ ಯೋಧರಿಗೆ ಆರ್ಮಿ ಕ್ಯಾಂಟಿನ್ ನಲ್ಲಿ ಅಗ್ಗದ ಬೆಲೆಗೆ ಮದ್ಯ ಸಿಗತ್ತೆ. ಈ ಹಿನ್ನೆಲೆ ಅದನ್ನ ಅವರ ಮನೆಯ ಸದಸ್ಯರು ಹೋಗಿ ತರಬಹುದು. ಹಾಗಾಗಿ ಮನೆಯ ಸದಸ್ಯರಾದ ಮಹಿಳೆಯರು ಮದ್ಯದ ಬಾಟೆಲ್ ಗಳನ್ನು ತರಲು ತೆರಳಿದ್ದಾರೆ. ಈ ವೇಳೆ ಮದ್ಯದ ಬಾಟಲ್ ಹಿಡಿದು ಬಸ್ ಹತ್ತಿದ್ದ ಇಬ್ಬರು ಮಹಿಳೆಯರನ್ನ ಮದ್ಯದ ಬಾಟಲ್ ತರಲು ಅವಕಾಶ ಇಲ್ಲ ಅಂತ ಕಂಡಕ್ಟರ್ ಕೆಳಗಿಳಿಸಿದ್ದಾರೆ. ಈ ವೇಳೆ ಕಂಡಕ್ಟರ್ ಜೊತೆಗೆ ಮಹಿಳೆಯರು ಜಗಳಕ್ಕೆ ಬಿದ್ದಿದ್ದಾರೆ. ಬಳಿಕ ದಾರಿ ಮಧ್ಯೆ ಮಹಿಳೆಯರನ್ನ ಇಳಿಸಿದ್ದಕ್ಕೆ ಕಂಡಕ್ಟರ್ ವಿರುದ್ಧ ದೂರು ನೀಡಲು ಮಹಿಳೆಯರು ಮುಂದಾಗಿದ್ದಾರೆ. ನಮಗೆ ಮದ್ಯ ತರಲು ಸರಕಾರ ಯಾವುದಾದರೂ ದಾರಿ ತೋರಿಸಲಿ. ಕುಡಿದು ಬಂದವರಿಗೆ ಬಸ್ನಲ್ಲಿ ಪ್ರಯಾಣಿಸಲು ಅವಕಾಶ ಕೊಡ್ತಿರಿ. ಆದ್ರೆ ಮನೆಗೆ ಮದ್ಯದ ಬಾಟಲ್ ತರಲು ಅವಕಾಶ ಯಾಕಿಲ್ಲ ಅಂತ ಗದಗ ಟೌನ್ ಪೊಲೀಸ್ ಠಾಣೆ ಮುಂದೆ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯರಿಗೆ ಮಾಜಿ ಸೈನಿಕರ ಸಂಘದವರು ಸಾಥ್ ನೀಡಿದ್ದಾರೆ.