ವ್ಯಾಪಕ ವಿರೋಧವಿದ್ರೆ ಆದೇಶ ಮರುಪರಿಶೀಲನೆ: ಸಾರಿಗೆ ಸಚಿವ ರೇವಣ್ಣ

ಮಂಗಳವಾರ, 24 ಅಕ್ಟೋಬರ್ 2017 (18:03 IST)
ಬೆಂಗಳೂರು: ಹೈಕೋರ್ಟ್ ನಿರ್ದೇಶನದಂತೆ 100 ಸಿಸಿಗಿಂತಲೂ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಡಬಲ್ ರೈಡಿಂಗ್ ನಿಷೇಧ ಮಾಡಿದ್ದು, ಅಗತ್ಯ ಬಿದ್ದರೆ ನಿರ್ಧಾರ ಮರುಪರಿಶೀಲನೆ ನಡೆಸಲಾಗುತ್ತದೆ ಎಂದು ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 100 ಸಿಸಿ ಹಾಗು ಅದಕ್ಕೂ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರು ಇರಬಾರದು ಎಂದು ಹೈಕೋರ್ಟ್ ಸೂಚನೆ ನೀಡಿದೆ. ಕರ್ನಾಟಕ ಮೋಟಾರು ವಾಹನ ಕಾಯ್ದೆ 143ರ ಅಡಿಯಲ್ಲಿ ಹಿಂಬದಿ ಸವಾರರಿಗೆ ಅವಕಾಶ ಇಲ್ಲ. ಹೀಗಾಗಿ ಅಪಘಾತದ ವೇಳೆ ವಿಮೆಯನ್ನು ನೀಡಲು ಬರುವುದಿಲ್ಲ. ಹೀಗಾಗಿ ಕೋರ್ಟ್ ಆದೇಶವನ್ನು ಜಾರಿಗೆ ತರುವ ಕೆಲಸ ಮಾಡಿದ್ದೇವೆಯೇ ಹೊರತು ಇದರಲ್ಲಿ ಸರ್ಕಾರದ ವೈಯಕ್ತಿಕ ಹಿತಾಸಕ್ತಿ ಇಲ್ಲ. ನಮ್ಮ ನಿರ್ಧಾರವೂ ಇದಲ್ಲ. ಒಂದು ವೇಳೆ ಜನರು ವ್ಯಾಪಕ ವಿರೋಧ ವ್ಯಕ್ತಪಡಿಸಿದಲ್ಲಿ ನಿರ್ಧಾರ ಮರುಪರಿಶೀಲನೆ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದರು.

ನ್ಯಾಯಾಲಯದ ಆದೇಶದ ಮೇರೆಗೆ ಈಗಾಗಲೇ ಮೊಪೆಡ್ ಗಳನ್ನು ನಿಷೇಧಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ.‌100 ಸಿಸಿಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರ ಪ್ರಯಾಣ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಇದು ಹೊಸದಾಗಿ ನೋಂದಣಿಯಾಗುವ ವಾಹನಗಳಿಗೆ ಮಾತ್ರ ಅನ್ವಯವಾಗುತ್ತದೆ. ನ್ಯಾಯಾಲಯದ ಆದೇಶವನ್ನು ನಮ್ಮ ಇಲಾಖೆ ಪಾಲನೆ ಮಾಡುತ್ತಿದೆ ಎಂದು ಸಾರಿಗೆ ಇಲಾಖೆ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಅ. 23 ರಂದು ಕೆಎಸ್ಆರ್‌ಟಿಸಿಯಲ್ಲಿ ದಾಖಲೆಯ ಹಣ ಸಂಗ್ರಹವಾಗಿದೆ. 13.67 ಕೋಟಿ ರೂ. ಪ್ರಯಾಣ ಶುಲ್ಕ ಸಂಗ್ರಹವಾಗಿದೆ. ಹೀಗಾಗಿ ಕೆಎಸ್ಆರ್‌ಟಿಸಿಯ ಎಲ್ಲಾ ಸಿಬ್ಬಂದಿಗೆ ಸಿಹಿ ಹಂಚಲು ಆದೇಶಿಸಿದ್ದೇವೆ. ಕೇಂದ್ರ ಸರ್ಕಾರ ಡೀಸೆಲ್ ದರ ಇಳಿಕೆ ಮಾಡಿದರೆ, ಕೂಡಲೇ ಪ್ರಯಾಣ ದರ ಇಳಿಕೆ ಮಾಡುತ್ತೇವೆ ಎಂದು ಸಚಿವ ರೇವಣ್ಣ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ