ನ್ಯೂಯಾರ್ಕ್‌ಗೆ ಈಗಲೇ ಟಿಕೆಟ್ ಬುಕ್ ಮಾಡಿ!

ಕಬೀರ್ ಖಾನ್ ಅವರ ಬಹುನಿರೀಕ್ಷೆಯ ನ್ಯೂಯಾರ್ಕ್ ಚಿತ್ರ ಹೊರಬಂದಿದೆ. ಒಮ್ಮೆ ಗೆಳೆತನದ ಗಾಥೆಯೇ ಇದಾದರೆ, ಇನ್ನೊಮ್ಮೆ ಭಯೋತ್ಪಾದನೆಯ ಕರಿನೆರಳಿನಲ್ಲೇ ನಿಮ್ಮ ತಲೆಗೆ ಚಪ್ಪಡಿ ಕಲ್ಲು ಒಗೆದಂತೆ ಭಾಸವಾಗುತ್ತದೆ. ನ್ಯೂಯಾರ್ಕ್ ಚಿತ್ರದ ಒಳಗೆ ಹೊಕ್ಕುತ್ತಿದ್ದಂತೆಯೇ ನೀವೊಮ್ಮೆ ಸ್ಯಾಮ್, ಮಾಯಾ ಹಾಗೂ ಓಮರ್‌ನ ಜಗತ್ತಿಗೇ ನಿಮ್ಮನ್ನು ತೆರೆದುಕೊಂಡಂತೆ ಅನಿಸುತ್ತದೆ.

ಕಬೀರ್ ಖಾನ್ ನ್ಯೂಯಾರ್ಕ್ ಚಿತ್ರವನ್ನು ತುಂಬ ಬೌದ್ಧಿಕವಾಗಿ ನೀಡಿದ್ದಾರೆ. ಚಿತ್ರದ ಕಥೆಯ ನಿರೂಪಣೆಯಲ್ಲಿ ಕಬೀರ್‌ಗೆ ಹಿಡಿತವಿರುವುದು ಎದ್ದು ಕಾಣುತ್ತದೆ. ಜಾನ್ ಅಬ್ರಹಾಂ, ಕತ್ರಿನಾ ಕೈಫ್ ಹಾಗೂ ನೀಲ್ ನಿತಿನ್ ಮುಖೇಶ್ ಬಾಲಿವುಡ್ ಚೀವನಕ್ಕೆ ಇದೊಂದು ಟರ್ನಿಂಗ್ ಪಾಯಿಂಟ್ ಅಂತಾನೇ ಹೇಳಬಹುದು. ಒಟ್ಟಾರೆ ಯಶ್ ರಾಜ್ ಬ್ಯಾನರ್‌ನ ಒಂದು ಅತ್ಯುತ್ತಮ ಚಿತ್ಪರ ನ್ಯೂಯಾರ್ಕ್ ಎಂದು ಫುಲ್ ಸರ್ಟಿಫಿಕೆಟ್ ನೀಡಬಹುದು. ಧೈರ್ಯವಾಗಿ ನ್ಯೂಯಾರ್ಕ್‌ಗೆ ನೀವು ಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡಬಹುದು.

ಓಮರ್ (ನೀಲ್ ನಿತಿನ್ ಮುಖೇಶ್) ತನ್ನ ಜೀವಮಾನದಲ್ಲೇ ಮೊದಲ ಬಾರಿಗೆ ವಿದೇಶಕ್ಕೆ ಪ್ರಯಾಣ ಬೆಳೆಸುತ್ತಾನೆ. ಕೂಡಲೇ ಅಮೆರಿಕದ ಜಗತ್ತು ಅವನಿಗಾಗಿ ತೆರೆದುಕೊಳ್ಳುತ್ತದೆ. ಕೆಲವೇ ಸಮಯದಲ್ಲಿ ಅಮೆರಿಕವನ್ನು ಪ್ರೀತಿಸತೊಡಗುತ್ತಾನೆ. ಅಮೆರಿಕನ್ ಗೆಳೆಯರಾದ ಸ್ಯಾಂ (ಜಾನ್ ಅಬ್ರಹಾಂ), ಮಾಯಾ (ಕತ್ರಿನಾ ಕೈಫ್) ಜತೆಗೆ ಅಮೆರಿಕ ಜೀವನವನ್ನು ಎಂಜಾಯ್ ಮಾಡಲು ಆರಂಭಿಸುತ್ತಾನೆ. ಆದರೆ ಚೆಂದಕ್ಕೆ ಹಾಯಾಗಿದ್ದ ಈ ಮೂವರ ಜೀವನ ಹಾಗೇ ಮುಂದುವರಿಯುವುದಿಲ್ಲ. ಎಫ್‌ಬಿಐ ಏಜೆಂಟ್ ರೋಷನ್ (ಇರ್ಫಾನ್ ಖಾನ್) ಎಂಟ್ರಿ ಇವರ ಜೀವನವನ್ನು ತಲೆಕೆಳಗಾಗಿಸುತ್ತದೆ. ಅಮೆರಿಕದ 9/11 ದಾಳಿಯ ಹಿನ್ನೆಲೆಯಲ್ಲಿ ಈವರೆಗೆ ಹಿಂದಿಯಲ್ಲಿ ಯಾವುದೇ ಚಿತ್ರ ಬಂದಿಲ್ಲ. ದಾಳಿಯ ಹಿನ್ನೆಲೆಯಲ್ಲಿ ಚಿತ್ರ ಮುಂದುವರಿದರೂ, ಕೆಲವೆಡೆ, ಅದರಲ್ಲೂ ಮುಖ್ಯವಾಗಿ ಜಾನ್ ತನ್ನ ಹಳೆಯ ಅಧ್ಯಾಯಗಳನ್ನು ಕೆದಕುವಾಗ ಚಿತ್ರದ ಕೆಲವು ದೃಶ್ಯಾವಳಿಗಳು ತಲೆಹರಟೆ ಮಾಡಿದಂತೆ ಅನಿಸುತ್ತದೆ.

IFM
ನ್ಯಾಯಾರ್ಕ್ ಚಿತ್ರ ಯಾಕೆ ಗೆಲ್ಲುತ್ತದೆಂದರೆ, ಕಬೀರ್ ಖಾನ್ ಚಿತ್ರವನ್ನು ಎಷ್ಟು ಸೊಗಸಾಗಿ ತೆಗೆದುಕೊಂಡು ಹೋಗಿದ್ದಾರೆಂದರೆ ಕಥೆಗೆ ಇಂಥ ಟ್ವಿಸ್ಟ್ ಸಿಗುತ್ತದೆಂದು ನೀವು ಕನಸು ಮನಸಿನಲ್ಲೂ ಮೊದಲೇ ಯೋಚಿಸಿರುವುದಿಲ್ಲ. ಜತೆಗೆ ಆ ಟ್ವಿಸ್ಟ್ ಕೂಡಾ ಅತ್ಯಂತ ಸಮಂಜಸವಾಗಿ, ಅಧಿಕಾರಯುತವಾಗಿ ಮೂಡಿಬಂದಿದೆ.

ನಿರ್ದೇಶಕರು ಕಥೆಯಲ್ಲಿ ಪಾತ್ರಗಳನ್ನು ಚೆನ್ನಾಗಿ ಹೆಣೆದಿದ್ದಾರೆ. ಆದರೆ ಕಥೆಯ ದ್ವಿತೀಯಾರ್ಧದಲ್ಲಿ ಜಾನ್‌ನ ಹಳೆಯ ನೆನಪುಗಳು ಸ್ವಲ್ಪ ಕಾಟ ಕೊಟ್ಟರೂ ಚಿತ್ರ ನೋಡಬಹುದಾದ ಅದ್ಭುತ ಕಥೆಯನ್ನೇ ನೀಡಿದೆ. ಇಲ್ಲಿ ಸಣ್ಣ ಲೋಪದೋಷ ನಿಮ್ಮ ಸಂತೋಷಕ್ಕೆ ಉಪದ್ರವ ಉಂಟುಮಾಡುವುದಿಲ್ಲ. ಚಿತ್ರದ ಕೊನೆಯಲ್ಲಿ ಸ್ವಲ್ಪ ಕಥೆಯನ್ನು ಎಳೆದಂತೆ ಅನಿಸಿದರೂ ಅದ್ಭುತವಾದ ಕ್ಲೈಮ್ಯಾಕ್ಸೇ ಅಂತ್ಯದಲ್ಲಿದೆ.

ನ್ಯೂಯಾರ್ಕ್‌ನಂತಹ ಚಿಂತನೆಗೆ ಹಚ್ಚುವ ಚಿತ್ರ ನೀಡಿದ ಕಬೀರ್ ಖಾನ್‌ಗೆ ಸಲಾಂ ಹೊಡೆಯಲೇಬೇಕು. ಯಾಕೆಂದರೆ ನ್ಯೂಯಾರ್ಕ್ ಸಾಮಾನ್ಯವಾದ ಇತರ ಮಸಾಲಾ ಚಿತ್ರಗಳ ಪಟ್ಟಿಯಲ್ಲಿ ಸೇರುವುದಿಲ್ಲ. ಹಾಗಂತ ತನ್ನ ತಾಜಾತನವನ್ನು ಉಳಿಸಿಕೊಂಡಿದೆ. ಜತೆಗೆ ಅಮೆರಿಕದ ಭಯೋತ್ಪಾದನಾ ನೆಲೆಗಟ್ಟನ್ನೂ ಕಬೀರ್‌ ಖಾನ್ ಉತ್ತಮವಾಗಿಯೇ ತೆರೆಯ ಮೇಲೆ ತಂದಿದ್ದಾರೆ. ಸಿನೆಮಾಟೋಗ್ರಫಿ ಅದ್ಭುತ. ಅಗತ್ಯವಿರುವಷ್ಟೇ ಹಾಡುಗಳನ್ನು ಕಬೀರ್ ಬಳಸಿದ್ದು, ಎಲ್ಲೆಂದರಲ್ಲಿ ಹಾಡನ್ನು ತೂರಿಸಿಲ್ಲ. ಒಟ್ಟಾರೆ ಉತ್ತಮ ಕಥೆ, ಬಿಗ್ ಸ್ಟಾರ್‌ಗಳು, ದೊಡ್ಡ ಬ್ಯಾನರ್‌ನ ಸಾಥ್ ಇರುವ ನ್ಯೂಯಾರ್ಕ್ ಪ್ರೇಕ್ಷಕರ ಮನಗೆಲ್ಲುವುದರಲ್ಲಿ ಆಶ್ಚರ್ಯವಿಲ್ಲ.

IFM
ಅಂದಹಾಗೆ, ನ್ಯೂಯಾರ್ಕ್‌ನಲ್ಲಿ ಇನ್ನೂ ಒಂದು ಸರ್‌ಪ್ರೈಸ್ ಇದೆ. ಜಾನ್, ಕತ್ರಿನಾ, ನೀಲ್ ಈ ಮೂವರೂ ತಮ್ಮ ಬಾಲಿವುಡ್ ಜೀವನದ ಅತ್ಯುತ್ತಮ ಅಭಿನಯವನ್ನೇ ಈ ಚಿತ್ರದಲ್ಲಿ ನೀಡಿದ್ದಾರೆ. ಪ್ರಥಮಾರ್ಧದಲ್ಲಿ ನೀಲ್ ನಿಮ್ಮನ್ನು ತನ್ನ ಅಭಿನಯದಿಂದ ಆವರಿಸಿಕೊಂಡರೆ, ದ್ವಿತೀಯಾರ್ಧದಲ್ಲಿ ಸಾನ್ ನಿಮ್ಮನ್ನು ಸಂಪೂರ್ಣವಾಗಿ ಆಕರ್ಷಿಸುತ್ತಾನೆ. ಅದರಲ್ಲೂ ತನ್ನ ಹಳೆಯ ನೆನಪುಗಳಿಗೆ ಜಾರುವ ಅಭಿನಯವನ್ನು ಜಾನ್ ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ. ಜಾನ್‌ ಅನುಭವಿಸುವ ಯಾತನೆಯನ್ನೂ ನೀವೂ ಅನುಭವಿಸುತ್ತೀರಿ. ಹಾಗಿದೆ ಜಾನ್ ನಟನೆ!

ನೀಲ್ ನಿತಿನ್‌ಗೆ ಈ ಚಿತ್ರ ತನ್ನ ಕೆರಿಯರ್‌ನ ಮಹತ್ವದ ಅಧ್ಯಾಯವೇ ಆಗಬಹುದು. ಆ ದೇಖೇ ಝರಾದಲ್ಲಿ ಅದ್ಭುತ ನಟನೆಯನ್ನೇ ಪ್ರದರ್ಶಿಸಿದ ನೀಲ್‌ಗೆ ಅಂಥಾ ಯಶಸ್ಸೇನೂ ತಂದುಕೊಡಲಿಲ್ಲ. ಹಾಗಾಗಿ ನೀಲ್‌ಗೆ ನ್ಯೂಯಾರ್ಕ್ ಉತ್ತಮ ಭವಷ್ಯ ನೀಡಬಹುದು ಎನ್ನಲು ಅಡ್ಡಿಯಿಲ್ಲ.

ಈವರೆಗೆ ಕಂಡಿದ್ದ ಕತ್ರಿನಾ ಕೈಫ್‌ಳನ್ನೇ ಈ ಚಿತ್ರದಲ್ಲೂ ಇಮ್ಯಾಜಿನ್ ಮಾಡಿಕೊಂಡು ಹೋದರೆ ನಿಮಗೆ ಶಾಕ್ ಆಗುತ್ತದೆ. ಆದರೆ ಅದು ಶಾಕ್ ಖಂಡಿತಾ ಅಲ್ಲ. ಒಂದು ಸ್ವೀಟೆಸ್ಟ್ ಸರ್‌ಪ್ರೈಸ್. ಈವರೆಗೆ ನಟಿಸಿದ ಚಿತ್ರಗಳಿಗಿಂತ ಕತ್ರಿನಾಗೆ ನ್ಯೂಯಾರ್ಕ್ ಒಂದು ಭಿನ್ನ ಚಿತ್ರ. ನಟನೆಯ ದೃಷ್ಟಿಯಿಂದಲೂ. ನಟನೆ, ಹಿಂದಿ ಎರಡೂ ಅಷ್ಟಾಗಿ ಬರದ ಕತ್ರಿನಾ ಮಾತ್ರ ಇಲ್ಲಿ ಅದ್ಭುತವಾಗಿ ಮಿಂಚಿದ್ದಾರೆ. ಅಷ್ಟೇ ಅಲ್ಲ ಕಂಗೊಳಿಸಿದ್ದಾರೆ ಕೂಡಾ. ಜತೆಗೆ ತನಗೆ ಒಂದು ಉತ್ತಮ ಮಸಾಲೆ ರಹಿತ ನಟನೆಗೇ ಆದ್ಯತೆಯಿರುವ ಚಿತ್ರ ಕೊಟ್ಟರೂ ತಾನು ಮಾಡಬಲ್ಲೆ ಎಂಬುದನ್ನು ಬಾಲಿವುಡ್ಡಿಗೆ ತೋರಿಸಿಕೊಟ್ಟಿದ್ದಾರೆ. ಇರ್ಫಾನ್ ಖಾನ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ತನ್ನ ಎಂದಿನ ಅದ್ಭುತ ಶೈಲಿಯಲ್ಲೇ ನಟನಾ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಒಟ್ಟಾರೆ ಯಶ್ ರಾಜ್ ಬ್ಯಾನರ್ ಅಡಿ ನಿರ್ಮಿತವಾದ ಒಂದು ಅದ್ಭುತ ಚಿತ್ರ ನ್ಯೂಯಾರ್ಕ್ ಎಂದು ಧಾರಾಳವಾಗಿ ಹೇಳಬಹುದು. ಜತೆಜತೆಗೇ, ಅಷ್ಟೇ ಧಾರಾಳವಾಗಿ ನೀವು ಮುಂಗಡವಾಗಿಯೇ ನ್ಯೂಯಾರ್ಕ್‌ಗೆ ಟಿಕೆಟ್ ಕೂಡಾ ಕಾದಿರಿಸಬಹುದು!
IFM